
ಬೆಂಗಳೂರು, ಸೆ. ೩- ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆಯ ವಾತಾವರಣವಿದೆ.
ದಕ್ಷಿಣ ಒಳನಾಡು ಸೇರಿದಂತೆ ಗುಡ್ಡಗಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುವ ವರದಿಗಳಿದ್ದು, ಸೆಪ್ಟೆಂಬರ್‌ನಲ್ಲಿ ನಿರೀಕ್ಷೆಯಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ನಾಲ್ಕು ದಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಇಂದು ಬೆಂಗಳೂರಿನಲ್ಲೂ ಅಲ್ಲಲ್ಲಿ ಮಳೆಯಾಗಲಿದೆ.
ಕೋಲಾರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬಿತ್ತನೆ ಕಾರ್ಯ ಮಾಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದೆರಡು ವಾರಗಳಿಂದ ಒಣಹವೆಯಿಂದ ಕಂಗೆಟ್ಟಿದ್ದ ಕೋಲಾರದ ಜನತೆ ಮಳೆಯಿಂದಾಗಿ ಸಂತಸಗೊಂಡಿದ್ದಾರೆ. ಕೋಲಾರದಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಪ್ಪಳದಲ್ಲಿ ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ.
ಕೊಪ್ಪಳದ ಬೆಟಗೇರಿಯ ರೈತ ವೀರಯ್ಯ ಮಳೆ ಕೊರತೆಯಿಂದ ೨ ಎಕರೆ ಜೋಳವನ್ನು ನಾಶಪಡಿಸಿದ್ದಾರೆ. ಮಳೆ ಕೊರತೆಯಿಂದ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಬಾಗಲಕೋಟೆಯ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ಗ್ರಾಮದ ಜಕಮಲದಿನ್ನಿ, ಬೇಕಮಲದಿನ್ನಿ ಹಾಗೂ ಪಾಲಾಟಿ, ದಾಸವಾಳ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.