ಮುಂದಿನ ನಾಲೈದು ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಸೆ ೨೫- ವಾಯುಭಾರ ಕುಸಿತದ ಪರಿಣಾಮ ಮುಂದಿನ ನಾಲೈದು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೆಪ್ಟೆಂಬರ್ ೨೮ರವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ, ರಾಯಚೂರು, ಧಾರವಾಡ, ಹಾವೇರಿ ಜಿಲ್ಲೆಗಳ ಕೆಲವೆಡೆ ಮುಂದಿನ ಐದು ದಿನ ಭಾರಿ ವರ್ಷಧಾರೆಯಾಗಲಿದೆ.

ಇದಲ್ಲದೆ ಗುಜರಾತ್, ಪೂರ್ವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕೊಂಕಣ ಪ್ರದೇಶದಲ್ಲಿ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹತ್ತು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕೊಂಚ ಇಳಿಕೆಯಾಗಿದ್ದ ಮಳೆಯ ಆರ್ಭಟ ಮತ್ತೆ ಆರಂಭವಾಗಿದ್ದು, ಇದೀಗ ರಾಜ್ಯದ ಹಲವೆಡೆ ಸೇರಿ ದೇಶದಲ್ಲಿ ಇನ್ನೂ ಕೆಲದಿನಗಳ ಕಾಲ ಮಳೆಯಾಗಲಿದ್ದು, ಜನರು ಎಚ್ಚರ ವಹಿಸುವುದು ಸೂಕ್ತ.
ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ೨೮ರವರೆಗೂ ಭಾರೀ ಮಳೆಯಾಗಲಿದೆ. ಮುಖ್ಯವಾಗಿ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.