ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಳ ಭೀತಿ

ನವದೆಹಲಿ, ಮೇ 4- ಕೊರೊನಾ ಸೋಂಕಿನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಎರಡು ಕೋಟಿ ಸೋಂಕು ದಾಟಿ ಮುನ್ನಡೆದಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ವಿಷಮ ಆಗುವ ಮುನ್ಸೂಚನೆ ನೀಡಿದೆ.

ಸರಿಸುಮಾರು ೧೪೦ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಸೋಂಕು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಆಗ ಇಡೀ ದೇಶ ಇನ್ನಷ್ಟು ಸಮಸ್ಯೆಗೆ ಸಿಲುಕಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಸೇರಿದಂತೆ, ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ, ನರಳಾಡಿ ಪ್ರಾಣ ಬಿಡುವ ಸ್ಥಿತಿ ನಿರ್ಮಾಣವಾಗಿದೆ.

ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಆಂಬ್ಯುಲೆನ್ಸ್‌ಗಳು ಸಾಲುಗಟ್ಟಿ ನಿಂತಿವೆ. ಇದನ್ನೆಲ್ಲಾ ನೋಡಿದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನುವ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ

ಹೊಸ ಪ್ರಕರಣದಿಂದಾಗಿ ವಿಶ್ವದಲ್ಲಿ ೨ ಕೋಟಿ ಸೋಂಕು ದಾಟಿದ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದ್ದು, ಅಮೆರಿಕ ಮೊದಲ ಸ್ಥಾನದಲ್ಲಿದೆ.

೩.೫೭ ಲಕ್ಷ ಹೊಸ ಸೋಂಕು:

ಇಂದು ಬೆಳಿಗ್ಗೆ ೮ ಗಂಟೆಯ ತನಕ ದೇಶದಲ್ಲಿ ಹೊಸದಾಗಿ ೩,೫೭,೨೨೯ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ೩,೪೪೯ ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ೩,೨೦,೨೮೯ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಹೊಸದಾಗಿ ದಾಖಲಾಗಿರುವ ಸೋಂಕು ಪ್ರಕರಣ ಸೇರಿದಂತೆ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ ೨,೦೨,೮೨,೮೩೩ ಮಂದಿಗೆ ಕಾಣಿಸಿಕೊಳ್ಳುವ ಮೂಲಕ ವಿಶ್ವದಲ್ಲಿ ಎರಡು ಕೋಟಿ ಸೋಂಕು ದಾಟಿದ ಎರಡನೇ ದೇಶವಾಗಿದೆ.

ಸೋಂಕಿನಿಂದ ಇದುವರೆಗೂ ೨,೨೨,೪೦೮ ಮಂದಿ ಸಾವನ್ನಪ್ಪಿದ್ದು ಸದ್ಯ ದೇಶದಲ್ಲಿ ೩೪,೪೭,೧೩೩ ಮಂದಿಗೆ ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ

ದೇಶದಲ್ಲಿ ಅತಿ ಹೆಚ್ಚು ಸೋಂಕು ದಾಖಲಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಗಣನೀಯವಾಗಿ ಕಡಿಮೆಯಾಗುತ್ತಿದೆ ಕಳೆದ ೨೪ ೫೦ಸಾವಿರಕ್ಕೂ ಕಡಿಮೆ ಸೋಂಕು ದೃಢಪಟ್ಟಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿಯೂ ಕಡಿಮೆ ಪ್ರಮಾಣದ ಸೋಂಕು ಧೃಢಪಟ್ಟಿದೆ.

ಆದರೆ ಕರ್ನಾಟಕದಲ್ಲಿ ಮಾತ್ರ ಕೊರೊನಾಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ ಇಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದರೂ ಸೋಂಕು ಹೆಚ್ಚಳವಾಗುತ್ತಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಮತ್ತಷ್ಟು ಸಮಸ್ಯೆಗೆ ಸಿಲುಕುವಂತೆ ಮಾಡಿದೆ.

೩ ತಿಂಗಳಲ್ಲಿ ದ್ವಿಗುಣ:

ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಕಳೆದ ಮೂರು ತಿಂಗಳಲ್ಲಿ ದ್ವಿಗುಣ ವಾಗಿದೆ. ಇದು ಭಾರತದಲ್ಲಿನ ಸೋಂಕಿನ ತೀವ್ರತೆಯನ್ನು ತೋರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ದೇಶದಲ್ಲಿ ಇದುವರೆಗೂ ೨ ಕೋಟಿಗೂ ಅಧಿಕ ಮಂದಿಗೆ ಸೋಂಕು ತಗುಲಿದ್ದು ೨.೨೦ ಲಕ್ಷ ಮಂದಿ ಮೃತ ಪಟ್ಟಿದ್ದಾರೆ ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಹೀಗಾಗಿ ಎಚ್ಚರಿಕೆ ವಹಿಸಿ ಎಂದು ಕೇಂದ್ರ-ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ

೧೫.೮೯ ಕೋಟಿ ಜನರಿಗೆ ಲಸಿಕೆ

ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ನಡುವೆಯೇ ಇದುವರೆಗೂ ೧೫.೮೯ ಕೋಟಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈಗಾಗಲೇ ಮೂರು ಹಂತಗಳಲ್ಲಿ ಲಸಿಕೆ ಹಾಕುವ ಅಭಿಯಾನ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ.