ಮುಂದಿನ ತಿಂಗಳು ಓಮಿನಿ ಸಂಚಾರ

ವಿಭಿನ್ನ ಕಥಾಹಂದರ ಹೊಂದಿರುವ “ಓಮಿನಿ”ಬಿಡುಗಡೆಗೆ ಸಜ್ಜಾಗಿದೆ.ಮಲೆನಾಡಿನ ಮಡಿಲಿನ ಪ್ರತಿಭೆ ಮಂಜು ಹೆದ್ದೂರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬಿಡುಗಡೆಗೆ ಮುನ್ನ ಟ್ರೈಲರ್ ಬಿಡುಗಡೆ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಮತ್ತಿತರು  ಚಿತ್ರಮಂದಿರಗಳಲ್ಲಿ “ಓಮಿನಿ” ಸಂಚಾರಕ್ಕೆ ಹಸಿರು ನಿಶಾನೆ ತೋರಿ ಶುಭಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಮಂಜು ಹೆದ್ದೂರು, “ಓಮಿನಿ” ಎಂದರೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂದು ಅರ್ಥ.”ಓಮಿನಿ” ಕಾರ್ ಸಹ. ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ. ಆಗಸ್ಟ್ 19 ರಂದು ಚಿತ್ರ ತೆರೆಗೆ ಬರಲಿದೆ. ನಮ್ಮೂರಿನವರೇ ಆದ ಗೃಹ ಸಚಿವರು ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಪದಗಳೇ ಹೊರಡುತ್ತಿಲ್ಲ. ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದೀನಿ ಎಂದರು.

ನಾಯಕ ಸಿದ್ದು ಮೂಲಿಮನಿ,ಲವ್, ಸಸ್ಪೆನ್ಸ್, ಹಾರರ್ ಎಲ್ಲಾ ಅಂಶಗಳು ಚಿತ್ರದಲ್ಲಿದೆ. “ಓಮಿನಿ” ಪ್ರಮುಖ ಪಾತ್ರ ವಹಿಸುತ್ತದೆ. ತೀರ್ಥಹಳ್ಳಿಯ ಸುಂದರ ಪರಿಸರ ಹಾಗು ದಾವಣಗೆರೆಯ ಗ್ಲಾಸ್ ಹೌಸ್‍ನಲ್ಲಿ ಚಿತ್ರೀಕರಣವಾಗಿರುವುದು ವಿಶೇಷ. “ಓಮಿನಿ” ಸಂಚಾರಕ್ಕೆ ಮುಹೂರ್ತ ನಿಗಧಿಯಾಗಿದೆ ಬೆಂಬಲವಿರಲಿ ಎಂದು ಮನವಿ ಮಾಡಿಕೊಂಡರು.

ನಾಯಕಿ ಅಶ್ವಿನಿ ಚಂದ್ರಶೇಖರ್,ಮಲೆನಾಡ ಹುಡುಗಿ. ಅದೇ ಊರಿನ ಹುಡುಗಿ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ ಎಂದರು. ಗೀತರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್ ಆರ್ ಗ್ರೂಪ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ಅರ್ಜುನ್ ರಾಮು ಸಂಗೀತ, ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ಪೂಜಾ ಜನಾರ್ದನ,ಭರತ್ ಬೋಪ್ಪಣ್ಣ, ಮಂಜು ಹೆದ್ದೂರ್, ಆಕಾಂಕ್ಷ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಮುಂತಾದವರಿದ್ದಾರೆ.