ಮುಂದಿನ ತಿಂಗಳಿನಿಂದ 12 ವರ್ಷ ದಾಟಿದ ಮಕ್ಕಳಿಗೆ ಲಸಿಕೆ ಗುರಿ

ನವದೆಹಲಿ,ಸೆ.22- ಕೊರೊನಾ ಸೋಂಕಿಗೆ ಲಸಿಕೆ ನೀಡುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ಮುಂದಿನ ತಿಂಗಳಿನಿಂದ 12 ವರ್ಷ ದಾಟಿದ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆಗಳಿವೆ.

ದೇಶಾದ್ಯಂತ 12 ಮತ್ತು 12 ವರ್ಷ ದಾಟಿದ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಜೈದೂಸ್ ಕಾಡಿಲ್ಲ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮಕ್ಕಳ ಮೇಲೆ ನೀಡಲು ಈಗಾಗಲೇ ಭಾರತೀಯ ಔಷಧ ಮಹಾನಿಯಂತ್ರಕ ಸಂಸ್ಥೆ ತುರ್ತು ಅನುಮತಿ ನೀಡಿದೆ

ವಿಶ್ವದ ಮೊದಲ ಡಿಎನ್ಎ ಆಧಾರಿತ ಜೈ ಕೋವ್ ಡಿ ಲಸಿಕೆಯನ್ನು ಜೈದೂಸ್ ಕಾಡಿಲ್ಲ ಸಂಸ್ಥೆ ಅಭಿವೃದ್ಧಿಪಡಿಸಿದ್ದು ಈ ಲಸಿಕೆಯನ್ನು ಮುಂದಿನ ತಿಂಗಳಿನಿಂದ ದೇಶದಲ್ಲಿ ಮಕ್ಕಳಿಗೆ ನೀಡುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಂದಿನ ತಿಂಗಳಿನಿಂದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ ಎನ್ನುವ ಕುರಿತು ಮಾಹಿತಿಗಳು ಹೊರಬಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರಾಕರಿಸಿದೆ.

140 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಜನವರಿ 16ರಿಂದ ಇಲ್ಲಿಯತನಕ ಒಟ್ಟಾರೆಯಾಗಿ 82.5 ಕೋಟಿ ಡೋಸ್ ಲಸಿಕೆಯನ್ನು ಭಾರತದಲ್ಲಿ ಇರುವರೆಗೂ ಹಾಕಲಾಗಿದೆ.

ಮುಂದಿನ ತಿಂಗಳಿನಿಂದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ ಎನ್ನುವ ವಿಷಯ ದೇಶದ ಅನೇಕ ಪೋಷಕರಲ್ಲಿ ಹರ್ಷಕ್ಕೆ ಕಾರಣವಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಾಗುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಎಲ್ಲಾ ಅರ್ಹ ನಾಗರಿಕರಿಗೆ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.