ಮುಂದಿನ ಆರ್ಥಿಕ ವರ್ಷದಲ್ಲಿ ಮಂಡಳಿಗೆ 5,000 ಕೋಟಿ ರೂ.:ದತ್ತಾತ್ರೇಯ ಪಾಟೀಲ ರೇವೂರು

ಕಲಬುರಗಿ,ಸೆ.20:ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಳಿಗೆ ಘೋಷಿಸಿದಂತೆ ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ 2023-24ನೇ ಆರ್ಥಿಕ ಸಾಲಿನಲ್ಲಿ 5,000 ಕೋಟಿ ರೂ. ಬಿಡುಗಡೆ ಮಾಡುವರು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ಭಾಗದ ಅಭಿವೃದ್ಧಿ ಕುರಿತು ಅಪಾರ ಕಾಳಜಿಯನ್ನು ಹೊಂದಿರುವ ಮುಖ್ಯಮಂತ್ರಿಗಳು, ಪ್ರಸಕ್ತ 2022-23ನೇ ಸಾಲಿಗೆ 3,000 ಕೋಟಿ ರೂ. ಅನುದಾನ ಘೋಷಿಸಿದಲ್ಲದೆ ಜಿಲ್ಲಾವಾರು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಮೊದಲನೇ ಕಂತಿನ ರೂಪವಾಗಿ 725 ಕೋಟಿ ರೂ. ಬಿಡುಗಡೆ ಮಾಡಿದ್ದು, ಬೃಹತ್ ಯೋಜನೆಗಳ ಮ್ಯಾಕ್ರೋ ನಿಧಿಗೆ ಯೋಜನೆಗಳನ್ನು ಸ್ವಯಂ ಹಾಕಿಕೊಂಡು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಂಡಳಿಗೆ ಘೋಷಿಸಿದಂತೆ ಅನುದಾನ ಬಾರದಿರುವುದೇ ಪ್ರದೇಶದ ಅಭಿವೃದ್ಧಿ ಕುಂಠಿತವಾಗಲು ಕಾರಣವಾಗಿದೆ ಎಂದಿದ್ದಾರೆ.