ಮುಂದಿನ ಅವಧಿಗೂ ಮುಂದುವರೆಸಲು ಒತ್ತಾಯ

ಚಾಮರಾಜನಗರ, ಮಾ. 27- ಮುಂಬರುವ ಮೇ 9 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧೆ ಮಾಡಬೇಕೆಂದು ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್ ಅವರನ್ನು ಸಭೆಯಲ್ಲಿ ಒಕ್ಕೂರಲಿನಿಂದ ಒತ್ತಾಯಿಸಲಾಯಿತು.
ನಗರದ ವರ್ತಕರ ಭವನದಲ್ಲಿ ಇಂದು ಸಾಯಂಕಾಲ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಂಬಂಧ ನಡೆದ ಸಮಾನ ಮನಸ್ಕರ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸದಸ್ಯರಾದ ವೆಂಕಟರಮಣಸ್ವಾಮಿ (ಪಾಪು) ವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ನಾಲ್ಕು ತಾಲೂಕುಗಳ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಮಾತನಾಡಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿ.ಎಸ್. ವಿನಯ್ ಉತ್ತಮವಾಗಿ ಪರಿಷತ್ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೇ ಜಿಲ್ಲಾ ಸಾಹಿತ್ಯ ಸಮ್ಮೇಳನ, ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪರಿಷತ್‍ಗೆ ಸಾವಿರಾರು ಸಂಖ್ಯೆಯಲ್ಲಿ ಸದಸ್ಯತ್ವ ನೋಂದಾವಣಿ ಮಾಡಿದ್ದು, ಎರಡು ಸಾವಿರ ಇದ್ದ ಸದಸ್ಯರ ಸಂಖ್ಯೆಯನ್ನು 5 ಸಾವಿರಕ್ಕೆ ಏರಿಕೆ ಮಾಡಿದ್ದಾರೆ. ಹೀಗಾಗಿ ಮುಂದಿನ ಅವಧಿಗೂ ಅವರೇ ಸ್ಪರ್ಧೆ ಮಾಡುವುದು ಒಳಿತು ಎಂದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಇದಕ್ಕು ಮುನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್, ಪರಿಷತ್ ಚುನಾವಣೆ ಸಂಬಂಧ ಚರ್ಚಿಸಲು ಕರೆದಿರುವ ಸಮಾನ ಮನಸ್ಕರ ಸಭೆಗೆ ಸಭೆಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದೀರಿ. ಕಳೆದ ಬಾರಿ ನನಗೆ ಅವಕಾಶ ಮಾಡಿಕೊಟ್ಟ ಪರಿಣಾಮ ಬಹಳ ಯಶಸ್ವಿಯಾಗಿ ಕನ್ನಡದ ಕೆಲಸವನ್ನು ಮಾಡಿರುವ ತೃಪ್ತಿ ಇದೆ. ಮುಂದಿನ ಬಾರಿ ನಾನು ಸ್ಪರ್ಧೆ ಮಾಡದೇ ಹೊಸಬರಿಗೆ ಅವಕಾಶ ಮಾಡಿಕೊಡುವ ತೀರ್ಮಾನ ಕೈಗೊಂಡಿದ್ದೆ. ಅದರೆ, ಈ ಹಿಂದೆ ಕಸಾಪ ಅಧ್ಯಕ್ಷರಾಗಿದ್ದರು ಈಗ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಐದು ವರ್ಷಗಳಲ್ಲಿ ಅನುಭವನ್ನು ಹೊಂದಿರುವ, ಸಂಘಟನೆಯಲ್ಲಿ ಸದಾ ಸಕ್ರಿಯಯವಾಗಿ ತೊಡಗಿಸಿಕೊಂಡು ಮನೆ ಮನೆಗೆ ತೆರಳಿ ಸದಸ್ಯತ್ವ ನೊಂದಾವಣಿ ಮಾಡಿರುವ ನಾನೇಕೆ ಸ್ಪರ್ಧೆ ಮಾಡಬಾರದು ಎಂಬ ಭಾವನೆ ಮಾಡಿದೆ. ಹೀಗಾಗಿ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದವರು ಮತ್ತೇ ಸ್ಪರ್ಧೆ ಮಾಡಿದರೆ ನನಗೆ ಅವಕಾಶ ಮಾಡಿಕೊಡಬೇಕೇಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಮಾತನಾಡಿದ ಬಹತೇಕ ಮಂದಿ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಬಹಳ ಜವಾಬ್ದಾರಿಯುತ ಸ್ಥಾನವಾಗಿದೆ. ಹೊಸಬರನ್ನು ಆಯ್ಕೆ ಮಾಡಿಕೊಂಡು ಚುನಾವಣೆ ಎದುರಿಸುವುದು ಕಷ್ಟಸಾಧ್ಯ. ಅಲ್ಲದೇ ಈಗಾಗಲೇ ಕಸಾಪ ಮಾಜಿ ಅಧ್ಯಕ್ಷರೊಬ್ಬರು ನಾನು ಆಕಾಂಕ್ಷಿ ಎಂದು ಪ್ರಚಾರ ಆರಂಭಿಸಿದ್ದಾರೆ. ಇದೆಲ್ಲವನ್ನು ಚರ್ಚೆ ಮಾಡಿ, ಸೂಕ್ತವಾದ ತೀರ್ಮಾನವನ್ನು ಸಭೆಯಲ್ಲಿ ಪ್ರಕಟಿಸಬೇಕು ಎಂದು ಕೋರಿದರು.
ಸಭಾಧ್ಯಕ್ಷರಾಗಿದ್ದ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಅನೇಕರು ಉತ್ಸಾಕರಾಗಿದ್ದಾರೆ. ಕಸಾಪ ಅಧ್ಯಕ್ಷರಾಗಿದ್ದವರು ಸ್ಪರ್ಧೆ ಮಾಡಿದರೆ, ಬಿ.ಎಸ್ ವಿನಯ್ ಅವರನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ಎಲ್ಲರು ಒಗ್ಗಟ್ಟಿನಿಂದ ಶ್ರಮಿಸೋಣ. ನಾನು ಸಹ ಈ ಹಿಂದೆ ಅಧ್ಯಕ್ಷರಾಗಿದ್ದ ಮಲೆಯೂರು ಗುರುಸ್ವಾಮಿ, ನಾಗಮಲ್ಲಪ್ಪ ಹಾಗು ಸೋಮಶೇಖರ ಬಿಸಲ್ವಾಡಿ ಅವರನ್ನು ಭೇಟಿ ಮಾಡಿ, ಮನವಿ ಮಾಡಿಕೊಳ್ಳುತ್ತೇನೆ. ಅವರು ಒಪ್ಪಿದರೆ ಎಲ್ಲರ ಸಮ್ಮಖದಲ್ಲಿ ಅವಿರೋಧ ಆಯ್ಕೆ ಮಾಡೋಣ. ಈಗ ಸಭೆಯ ತೀರ್ಮಾನದಂತೆ ವಿನಯ್ ಅವರನ್ನು ಅಭ್ಯರ್ಥಿ ಮಾಡಿ, ಚುನಾವಣೆ ಸ್ಪರ್ಧೇ ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಿ. ಇವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಘೋಷಣೆ ಮಾಡಿದರು.
ಸಭೆಯಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ರಾಜಪ್ಪ, ಬಿಳಿಗಿರಿನಾಯಕ, ಕೋಶಾಧ್ಯಕ್ಷ ಸಿ.ಎಸ್. ನಿರಂಜನ್‍ಕುಮಾರ್, ಚಾ.ನಗರ ತಾಲೂಕು ಅಧ್ಯಕ್ಷರಾದ ಚಾ.ನಗರ ಬಸವರಾಜು, ಯಳಂದೂರು ಅಧ್ಯಕ್ಷ ಮದ್ದೂರು ವಿರೂಪಾಕ್ಷ, ಕೊಳ್ಳೇಗಾಲ ನಂಜುಂಡಸ್ವಾಮಿ, ಹನೂರು-ಶ್ರೀನಿವಾಸನಾಯ್ಡು, ಪದಾಧಿಕಾರಿಗಳಾದ ವೆಂಕಟಮಾದೇಗೌಡ, ಕೃಷ್ಣಸ್ವಾಮಿನಾಯಕ, ಮಲ್ಲಶೆಟ್ಟಿ, ಮಹೇಶಗೌಡ, ಮಹಮದ್ ಅಸ್ಗರ್, ಮನೋಜ್‍ಗೌಡ, ಸುಧಾ ದುಂಡಮಹದೇವ್, ಲತಾಪುಟ್ಟಸ್ವಾಮಿ, ಗುರುಲಿಂಗಮ್ಮ, ಪದ್ಮಾಕ್ಷಿ, ಹನೂರಿನ ಮಲ್ಲೇಶ್ ಮಹಾಲಿಂಗಕಟ್ಟೆ, ಗುರುಪ್ರಸಾದ್ ಕೋಡಗಾಪುರ, ಕಿರಣ್‍ರಾಜ್, ಎಚ್.ಎಸ್. ಗಂಗಾಧರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.