ಮುಂಜಾಗ್ರತೆಯಿಂದ ಮಲೇರಿಯಾ ತಡೆಯಲು ಸಾಧ್ಯ

ಕಲಬುರಗಿ : ಎ.29:ಚಳಿ,ಜ್ವರ,ನಡುಕ ಇವುಗಳು ಮಲೇರಿಯಾ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿದ್ದು, ಕಂಡುಬಂದರೆ ತಕ್ಷಣ ರಕ್ಷ ಪರೀಕ್ಷೆ ಮಾಡಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಬೇಕು. ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡಬೇಕು, ಕೆಲವು ಮುಂಜಾಗ್ರತಾ ಕ್ರಮಗಳು ಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.

      ನಗರದ ಶೇಖರೋಜಾದಲ್ಲಿರುವ 'ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ಸಹಯೋಗದೊಂದಿಗೆ ಶುಕ್ರವಾರ ಜರುಗಿದ 'ವಿಶ್ವ ಮಲೇರಿಯಾ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
    ಸೋಂಕಿತ ಅನಾಫಿಲೀಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಬರುತ್ತದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ನೀರಿನ ಸಂಗ್ರಹಗಳನ್ನು ಭದ್ರವಾಗಿ ಮುಚ್ಚಿಡುವುದು, ಸೊಳ್ಳೆ ಪರದೆ ಮತ್ತು ನಿರೋಧಕಗಳನ್ನು ಬಳಸುವುದು, ಕಾಯಿಸಿ, ಆರಿಸಿದ ಶುದ್ಧವಾದ ನೀರನ್ನು ಕುಡಿಯುವುದು, ಸಮತೋಲಿತ ಆಹಾರವನ್ನು ಸೇವಿಸುವುದು, ಮಳೆಯಲ್ಲಿ ನೆನೆಯದಂತೆ ಲಕ್ಷ್ಯವಹಿಸುವುದು ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವದರ ಮೂಲಕ ಮಲೇರಿಯಾ ಕಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದು ಅನೇಕ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
     ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಅರ್ಚನಾ ಸಿಂಗೆ, ಚಂದಮ್ಮ ಮರಾಠಾ, ಲಕ್ಷ್ಮೀಕಾಂತ ಹಂಗರಗಿ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.