ಮುಂಜಾಗ್ರತೆಯಿಂದ ಏಡ್ಸ್ ಪೀಡಿತರ ಸಂಖ್ಯೆ ಇಳಿಮುಖ

ಕಲಬುರಗಿ,ಡಿ.1: ಜಗತ್ತಿನ ಭೀಕರ ರೋಗಗಳಲ್ಲಿ ಒಂದಾದ ಏಡ್ಸ್ ರೋಗವು ವಿವಿಧ ಕಾರಣಗಳಿಂದ ಉಂಟಾಗುತ್ತಿದ್ದು ಅದಕ್ಕೆ ನಿರ್ಧಿಷ್ಟ ಔಷಧಿಯಿಲ್ಲ. ಅದರ ಬಗ್ಗೆ ಮುನ್ನೆಚ್ಚರಿಕೆ, ಮುಂಜಾಗೃತಿಯು ಎಲ್ಲೆಡೆ ವ್ಯಾಪಕವಾಗಿ ಮೂಡಿಸುತ್ತಿರುವದರಿಂದ ರೋಗ ಪೀಡಿತರ ಸಂಖ್ಯೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಳಿಮುಖವಾಗುತ್ತಿದೆ ಎಂದು ಹೈ.ಕ.ಶಿ.ಸಂಸ್ಥೆ ಉಪಾಧ್ಯಕ್ಷ ಡಾ.ಶರಣಬಸಪ್ಪ ಹರವಾಳ ಅಭಿಮತ ವ್ಯಕ್ತಪಡಿಸಿದರು.
ನಗರದ ಖೂಬಾ ಪ್ಲಾಟ್‍ನಲ್ಲಿರುವ ‘ನಾಗಠಾಣ ಮತ್ತು ಹರವಾಳ ಆಸ್ಪತ್ರೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ವಿಶ್ವ ಏಡ್ಸ್ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ರೋಗ ಪೀಡಿತ ತಾಯಿಯಿಂದ ಮಗುವಿಗೆ ಪ್ರಸಾರ, ರೋಗಿ ಬಳಸಿದ ಬ್ಲೇಡ್, ಸೀರೆಂಜ್ ಬಳಸುವುದು ಸೇರಿದಂತೆ ಮತ್ತೀತರ ಕಾರಣಗಳಿಂದ ರೋಗ ಹರಡುತ್ತದೆ. ಆದರೆ ರೋಗಪೀಡಿತ ವ್ಯಕ್ತಿಯ ಜೊತೆ ಮಾತನಾಡುವದರಿಂದ, ಮುಟ್ಟುವದರಿಂದ, ಬಳಸಿದ ವಸ್ತುಗಳನ್ನು ಮುಟ್ಟುವದರಿಂದ, ಗಾಳಿ ತೆಗೆದುಕೊಳ್ಳುವದರಿಂದ ಈ ರೋಗ ಹರಡುವದಿಲ್ಲ. ಇದರ ಬಗ್ಗೆ ಅನಾವಶ್ಯಕವಾದ ಭಯ ಬೇಡವೆಂದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಏಡ್ಸ್ ರೋಗಪೀಡಿತರ ಬಗ್ಗೆ ಸಮಾಜ ಕೀಳರಿಮೆ ತಾಳದೆ, ರೋಗಿಗಳಿಗೆ ತೊಂದರೆ ನೀಡಿದರೆ, ಅವರು ಮಾನಸಿಕವಾಗಿ ಮತ್ತಷು ಕುಗ್ಗಿ ಬೇಗನೆ ಸಾವಿಗೆ ತುತ್ತಾಗುತ್ತಾರೆ. ಆದ್ದರಿಂದ ಅವರಿಗೂ ಕೂಡಾ ಬದಕಲು ಅನವು ಮಾಡಿಕೊಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಕಾಂತ ಹರವಾಳ, ವೀರಪಾಕ್ಷಪ್ಪ ಗಣಜಲಖೇಡ್, ಮಲ್ಲಿಕಾರ್ಜುನ ಎ.ಪಾಟೀಲ, ಸಂತೋಷ ಹರವಾಳ, ಸಂತೋಷ ಯೇರಿ, ರವಿಶಂಕರ ಮದ್ರಿ, ಶರಣು ಪಾಟೀಲ, ಕಾಂತಮ್ಮ, ಸಂತೋಷಿ, ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.