ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮಾ ಯೋಜನೆ:ವಿಮಾ ಕಂತು ಪಾವತಿಸುವ ಕೊನೆಯ ದಿನ ಆ. 7 ರವರೆಗೆ ವಿಸ್ತರಣೆ

ಕಲಬುರಗಿ,ಆ.03:2023-24ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಸಾಲ ಪಡೆದ ಹಾಗೂ ಸಾಲ ಪಡೆಯದ ಜಿಲ್ಲೆಯ ರೈತರು ವಿಮಾ ಕಂತು ಪಾವತಿಸುವ ಕೊನೆಯ ದಿನಾಂಕವನ್ನು 2023ರ ಆಗಸ್ಟ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

  ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ ಮತ್ತು ಹಸಿರು ಮೆಣಸಿನಕಾಯಿ (ನೀರಾವರಿ) ಬೆಳೆಗಳನ್ನು ಜಿಲ್ಲೆಯ ತಾಲೂಕಿನ ಎಲ್ಲಾ ಪಂಚಾಯತ್‍ಗಳು ಮತ್ತು ದ್ರಾಕ್ಷಿ ಬೆಳೆಯನ್ನು ಅಫಜಲಪೂರ-15, ಆಳಂದ-15, ಕಲಬುರಗಿ-2, ಚಿಂಚೋಳಿ-1, ಚಿತ್ತಾಪೂರ-1, ಜೇವರ್ಗಿ-3 ಹಾಗೂ ಯಡ್ರಾಮಿ-9 ಗ್ರಾಮ ಪಂಚಾಯತ್‍ಗಳು ಮಾತ್ರ ಈ ಯೋಜನೆಯ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ.
  ಹವಾಮಾನ ಅಂಶಗಳಾದ ತಾಪಮಾನ, ಮಳೆಯ ಪ್ರಮಾಣ, ಆರ್ದತೆ ಇತ್ಯಾದಿ ಮಾಹಿತಿಗಳನ್ನು ಸ್ಥಳಿಯವಾಗಿ ಲಭ್ಯವಿರುವ ಟೆಲಿಮೇಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮಾ ನಷ್ಟವನ್ನು ತಿರ್ಮಾನಿಸಲಾಗುತ್ತದೆ. 

ಕಲಬುರಗಿ ಜಿಲ್ಲೆಗೆ KSHEMA ವಿಮಾ ಕಂಪನಿಯು ಆಯ್ಕೆಯಾಗಿದ್ದು, ವಿಮೆ ಕಂತಿಗೆ ಸಂಬಂಧಪಟ್ಟಂತೆ ಹಸಿರು ಮೆಣಸಿನಕಾಯಿ (ನೀರಾವರಿ) ಬೆಳೆಗೆ 3550 ರೂ., ಪಪ್ಪಾಯ ಬೆಳೆಗೆ 6700 ರೂ. ಹಾಗೂ ದ್ರಾಕ್ಷಿ ಬೆಳೆಗೆ 14000 ರೂ. ಪ್ರತಿ ಹೇಕ್ಟೆರ್‍ಗೆ ರೈತರು ತಮ್ಮ ವಿಮೆ ಕಂತಿನ ಮೊತ್ತವನ್ನು ಪಾವತಿಸಬೇಕಾಗಿರುತ್ತದೆ.

ಈ ಯೋಜನೆಯ ಸದುಪಯೋಗ ಪಡೆಯಲು ಬೆಳೆ ಸಾಲ ಪಡೆಯದ ರೈತರು ಹತ್ತಿರದ ಬ್ಯಾಂಕುಗಳಿಗೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSE) ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಹಾಗೂ ಸ್ವಯಂ ಘೋಷಿತ ಬೆಳೆ ಪ್ರಮಾಣಪತ್ರದೊಂದಿಗೆ ಭೇಟಿ ನೀಡಿ, ರೈತರು ಈ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

ಈ ಹಿಂದೆ ರೈತರು ವಿಮಾ ಕಂತು ಪಾವತಿಸುವ ಕೊನೆಯ ದಿನಾಂಕವನ್ನು 2023ರ ಜುಲೈ 31 ರವರೆಗೆ ನಿಗದಿಪಡಿಸಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಸ್ಥಳಿಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ ಅಥವಾ ಹತ್ತಿರದ ಬ್ಯಾಂಕ್‍ಗಳ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.