ವಿಜಯಪುರ:ಜೂ.4: ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಸಮರ್ಪಕವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ಕಳಪೆ ಮಟ್ಟದ ಬಿತ್ತನೆ ಬೀಜ ರಸಗೊಬ್ಬರ ಮಾರಾಟ ಹಾಗೂ ಹೆಚ್ಚಿನ ದರ ವಸೂಲಿಯಾಗದಂತೆ ತೀವ್ರ ನಿಗಾ ಇಡಬೇಕು. ಕಳಪೆ ಮಟ್ಟದ ಬೀಜ-ರಸಗೊಬ್ಬರ ಕುರಿತು ಅಧಿಕಾರಿಗಳು ಮುಂಚೆನೆ ಪರಿಶೀಲನೆ ನಡೆಸಿ, ಯಾವುದೇ ಕಾರಣಕ್ಕೂ ಕಳಪೆ ಮಟ್ಟದ ಬೀಜ-ರಸಗೊಬ್ಬರ ಮಾರಾಟವಾಗದಂತೆ ನೋಡಿಕೊಳ್ಳಬೇಕು ಈ ಕುರಿತು ಜಿಲ್ಲೆಯ ರೈತರಿಂದ ದೂರುಗಳು ಬರದ ಹಾಗೆ ನೋಡಿಕೊಂಡು ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಯಾವುದೇ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಸಹ ತಮ್ಮ ತಮ್ಮ ಅಂಗಡಿಗಳಲ್ಲಿ ದಾಸ್ತಾನಿರುವ ರಸಗೊಬ್ಬರ ಮಾಹಿತಿಯನ್ನು ರೈತರಿಗೆ ಕಾಣುವಂತೆ ಫಲಕಗಳಲ್ಲಿ ಪ್ರದರ್ಶಿಸಬೇಕು. ದಾಸ್ತಾನು ಪ್ರಮಾಣ, ದರ, ಗುಣಮಟ್ಟ ಕುರಿತು ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ರೈತರಿಗೆ ಯಾವುದೇ ಆಮಿಷಗಳನ್ನು ನೀಡಿ, ಕಡ್ಡಾಯವಾಗಿ ಈ ಗೊಬ್ಬರ ಖರೀದಿಲೇಬೇಕು ಎಂದು ಒತ್ತಡ ಹೇರಬಾರದು ಎಂದು ಹೇಳಿದರು.
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ-ರಸಗೊಬ್ಬರ ವಿತರಣೆ ಸಂದರ್ಭದಲ್ಲಿ ಜನದಟ್ಟೆಣೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ಗೊಂದಲವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ರೈತರು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಬೀಜ-ಗೊಬ್ಬರ ಪಡೆದುಕೊಳ್ಳಲು ತೊಂದರೆಯಾಗದಂತೆ ಹಾಗೂ ಈ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಬಿತ್ತನೆ ಬೀಜ-ರಸಗೊಬ್ಬರ ವಿತರಿಸಿ ನಿಗದಿತ ಬಿತ್ತನೆ ಗುರಿ ಸಾಧಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ಎಲ್.ರೂಪಾ ಅವರು ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಯಾವುದೇ ಕೊರತೆಯಿಲ್ಲ. ಕಳಪೆ ಮಟ್ಟದ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಹಾಕಲು ಬಿತ್ತನೆ ಬೀಜದ ಪ್ಯಾಕೆಟ್‍ಗಳ ಮೇಲೆ ಈ ಸಲ ಕ್ಯೂಆರ್ ಕೋಡ್ ಅಭಿವೃದ್ದಿಪಡಿಸಲಾಗಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಬೀಜದ ಗುಣಮಟ್ಟ ಒಳಗೊಂಡಂತೆ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಸವನಬಾಗೇವಾಡಿ ತಾಲೂಕಿನ 1,17,417 ಹೆಕ್ಟೇರ್, ವಿಜಯಪುರ ತಾಲೂಕಿನ 1,65,330 ಹೆಕ್ಟೇರ್, ಇಂಡಿ ತಾಲೂಕಿನ 1,64,178 ಹೆಕ್ಟೇರ್, ಮುದ್ದೇಬಿಹಾಳ ತಾಲೂಕಿನ 1,11,401 ಹೆಕ್ಟೇರ್, ಸಿಂದಗಿ ತಾಲೂಕಿನ 1,78,468 ಹೆಕ್ಟೇರ್ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7,36,794 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ, ಮೆಕ್ಕೆ ಜೋಳ, ಸಜ್ಜೆ, ಸೂರ್ಯಕಾಂತಿ ಹತ್ತಿ ಸೇರಿದಂತೆ 7,36,794 ಹೆಕ್ಟೆರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದ್ದು, ತೊಗರಿ 9200 ಕ್ವಿಂಟಾಲ್, ಮೆಕ್ಕೆಜೋಳ 905 ಕ್ವಿಂ. , ಹೆಸರು 23 ಕ್ವಿಂ., ಸಜ್ಜೆ 39 ಕ್ವಿಂ., ಸೂರ್ಯಕಾಂತಿ 36 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಿ, ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಸಲು ಕ್ರಮ ವಹಿಸಲಾಗಿದೆ ಹಾಗೂ 32,746 ಟನ್ ಯೂರಿಯಾ, 14,452 ಟನ್ ಡಿಎಪಿ, 37002 ಟನ್ ಕಾಂಪ್ಲೆಕ್ಸ್, 698ಟನ್ ಎಂಓಪಿ ರಸಗೊಬ್ಬರ ಹಾಗೂ 3840 ಟನ್ ಎಸ್‍ಎಸ್‍ಪಿ ರಸಗೊಬ್ಬರ ಸೇರಿದಂತೆ 88,738 ಟನ್ ರಸಗೊಬ್ಬರ ದಾಸ್ತಾನಿದ್ದು,ವಿವಿಧ ಬೆಳೆಗಳ ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರದಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ದಾಸ್ತಾನು ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ 2023-24ನೇ ಸಾಲಿನ ಏಪ್ರಿಲ್-2023ರ ಮಾಹೆಯಲ್ಲಿ ಸಾಮಾನ್ಯ ಮಳೆ 15 ಮಿ.ಮಿ. ಆಗಬೇಕಾಗಿದ್ದು, 36 ಮಿಮಿ ಮಳೆ ಆಗಿದೆ. ಮೇ.2023 ಮಾಹೆಯಲ್ಲಿ ಮುಂಗಾರು ಹಂಗಾಮುನಲ್ಲಿ ಜಿಲ್ಲೆಯಲ್ಲಿ ಸಾಮಾನ್ಯ ಮಳೆ 37.5 ಮಿ.ಮಿ. ಆಗಬೇಕಾಗಿದ್ದು, 47.9 ಮಳೆ ಆಗಿದೆ. ಈ ಪೂರ್ವ ಮುಂಗಾರು ಮಳೆಯು ಭೂಮಿ ಸಿದ್ಧತೆಗೆ ಅನುಕೂಲ ಕಲ್ಪಿಸಿಕೊಟಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಹೊರತಂದಿರುವ ಬೆಳೆ ರೋಗ ನಿರ್ವಹಣಾ ಕ್ರಮಗಳ ಪೋಸ್ಟ್‍ರ್‍ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರು, ಕೃಷಿ ಇಲಾಖೆ ವಿವಿಧ ತಾಲೂಕಾ ಅಧಿಕಾರಿಗಳು ಸೇರಿದಂತೆ ರಸಗೊಬ್ಬರ ಪೂರೈಕೆದಾರ ಕೋರಮಂಡಲ್, ಇಫ್ಕೋ, ಜುವಾರಿ ಸಂಸ್ಥೆಯ ಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು