ಮುಂಗಾರು ಹಂಗಾಮಿಗೆ 99671 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹಾಗೂ 3.64 ಲಕ್ಷ ಟನ್ ಉತ್ಪಾದನಾ ಗುರಿ

ಕಲಬುರಗಿ.ಜೂ.04:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ಕಲಬುರಗಿ ಹಾಗೂ ಕಮಲಾಪುರ ತಾಲೂಕುಗಳಲ್ಲಿ ಒಟ್ಟು 99671 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಹಾಗೂ 3.64 ಲಕ್ಷ ಟನ್ ಉತ್ಪಾದನಾ ಗುರಿ ಹೊಂದಲಾಗಿದೆ ಎಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕಾಂತ ಜೀವಣಗಿ ಅವರು ತಿಳಿಸಿದ್ದಾರೆ.

ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜವನ್ನು ಪೂರೈಸಲು ಬಿತ್ತನೆ ಬೀಜಗಳಾದ ತೊಗರಿ, ಹೆಸರು, ಉದ್ದು, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತು ಸೊಯಾಬಿನ್ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ರೈತರು ಮುಂಜಾಗ್ರತಾ ಕ್ರಮ ಅನುಸರಿಸಬೇಕು. 

2021ರ ಮೇ 30 ರಿಂದ ಜೂನ್ 4ರವರೆಗೆ ಕಲಬುರಗಿ ಹೋಬಳಿ ವ್ಯಾಪ್ತಿಯಲ್ಲಿ 58.80 ಮಿ.ಮೀ., ಫರಹತಾಬಾದ ಹೋಬಳಿ ವ್ಯಾಪ್ತಿಯಲ್ಲಿ 53.60 ಮಿ.ಮೀ., ಪಟ್ಟಣ ಹೋಬಳಿ  ವ್ಯಾಪ್ತಿಯಲ್ಲಿ 34.00 ಮಿ.ಮೀ., ಅವರಾದ (ಬಿ) ಹೋಬಳಿ ವ್ಯಾಪ್ತಿಯಲ್ಲಿ 36 ಮಿ.ಮೀ., ಕಮಲಾಪೂರ ಹೋಬಳಿ ವ್ಯಾಪ್ತಿಯಲ್ಲಿ 2.00 ಮಿ.ಮೀ., ಮಹಾಗಾಂವ ಹೋಬಳಿ ವ್ಯಾಪ್ತಿಯಲ್ಲಿ 38.00ಮಿ.ಮೀ. ಮಳೆಯಾಗಿದೆ.

ಈ ಮಳೆಯಿಂದ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆಗೆ ಪೂರ್ವ ತಯಾರಿಯನ್ನು ಕೈಗೊಳ್ಳಲು ಅನುಕೂಲಕರವಾದ ವಾತಾವರಣ ನಿರ್ಮಾಣವಾಗಿದ್ದು, ಕನಿಷ್ಠ 60 ರಿಂದ 80 ಮೀ.ಮೀ ಮಳೆಯಾದ ನಂತರ ಭೂಮಿಯು ಹದವಾಗಿ ಬಿತ್ತನೆಗೆ ಯೋಗ್ಯವಾಗಲಿದ್ದು, ರೈತರು ತದನಂತರ ಬಿತ್ತನೆ ಕಾರ್ಯ ಕೈಗೊಳ್ಳಬಹುದಾಗಿದೆ.

ಅದೇ ರೀತಿ ಪ್ರಸಕ್ತ ಹಂಗಾಮಿಗಾಗಿ ಬೇಕಾಗುವ ರಸಗೊಬ್ಬರವನ್ನು ಸಹ ಎಲ್ಲಾ ಹೊಬಳಿಯ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಹಾಗೂ ಅಧಿಕೃತ ರಸಗೊಬ್ಬರ ಮಾರಾಟಗಾರರ ಮೂಲಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಹಾಗೂ ಅಧಿಕೃತ ಮಾರಾಟಗಾರರ ಮೂಲಕ ಮಾತ್ರ ರಸಗೊಬ್ಬರವನ್ನು ಖರೀದಿಸಲು ಅವರು ರೈತರಲ್ಲಿ ಮನವಿ ಮಾಡಿದ್ದಾರೆ.