ಮುಂಗಾರು ಬೆಳೆ ವಿಮೆ ಬೆಳೆಹಾನಿ ಪರಿಹಾರ ಘೋಷಣೆಗೆ ಆಗ್ರಹ


ಲಕ್ಷ್ಮೇಶ್ವರ,ಆ13: ತಾಲೂಕಿನಲ್ಲಿ ಮಳೆಯ ಅಭಾವದಿಂದಾಗಿ ರೈತರು ನೂರಾರು ಎಕರೆ ಪ್ರದೇಶದಲ್ಲಿನ ಗೋವಿನ ಜೋಳದ ಬೆಳೆ ಒಣಗುತ್ತಿರುವುದರಿಂದ ಅಲ್ಲಲ್ಲಿ ಬೆಳೆಯನ್ನು ರೈತರು ನಾಶಪಡಿಸುತ್ತಿದ್ದಾರೆ.
ಆಗಸ್ಟ್ ತಿಂಗಳ ಎರಡನೇ ವಾರ ಕಳೆಯುತ್ತಿದ್ದರು ಆಶ್ಲೇಷ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ನಿಧಾನವಾಗಿ ಒಣಗಲಾರಬ್ಬಿಸಿದ್ದು ಇದರಿಂದ ಕಂಗೆಟ್ಟ ರೈತರು ಬೆಳೆಗಳನ್ನು ರೋಟಾವೇಟರ ಟ್ರ್ಯಾಕ್ಟರ್ ಇವುಗಳಿಂದ ಹರಗುತ್ತಿದ್ದಾರೆ. ತಾಲೂಕಿನ ದೊಡ್ಡೋರು ಸೂರಣಗಿ ಮತ್ತಿತರ ಕಡೆಗಳಲ್ಲಿ ರೈತರು ಬೆಳೆ ಕುಂಠಿತ ಇಳುವರಿ ಕುಸಿತ ಮತ್ತು ಒಡಗುತ್ತಿರುವುದರಿಂದ ಸಾವಿರಾರು ಹಣ ಖರ್ಚು ಮಾಡಿ ಉತ್ತಿ ಬಿತ್ತಿ ಬೆಳದ ಬೆಳೆಯನ್ನು ರೈತರು ನಾಶಪಡಿಸುತ್ತಿದ್ದಾರೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ ಗೋವಿನ ಜೋಳವನ್ನು ಬೆಳೆಯಲಾಗಿದ್ದು ಈಗ ಆ ಬೆಳೆಗೆ ಕೈ ಕೊಟ್ಟ ಮಳೆ ರೈತರನ್ನು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.
ಬಾಲೆಹೊಸೂರು ಗ್ರಾಮದ ಗುಡ್ಡಪ್ಪ ಬೆಟಿಗೇರಿ ಹಾಲಪ್ಪ ದನಕಟ್ಟವರ ಗದಿಗೆಪ್ಪ ಹರಿಜನ ಹುತ್ತಪ ಮೂಲಿಮನಿ ಎಂಬ ರೈತರು ಕಳೆದ ಎರಡು ಮೂರು ದಿನಗಳಿಂದ ಗೋವಿನ ಜೋಳದ ಬೆಳೆಯನ್ನು ಹತಾಶಗೊಂಡು ನಾಶಪಡಿಸಿದ್ದಾರೆ.
ಈಗಾಗಲೇ ಬೆಳೆ ಕಳೆದುಕೊಂಡಿರುವ ರೈತರಿಗೆ ಸರ್ಕಾರ ಕೃಷಿ ಇಲಾಖೆಯ ಮುಖಾಂತರ ಸಮೀಕ್ಷೆ ಮಾಡಿ ಬೆಳೆ ಹಾನಿಗೀಡಾದ ರೈತರಿಗೆ ಕೂಡಲೇ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರವನ್ನು ಘೋಷಿಸಬೇಕು ಎಂದು ಯುವ ಮುಖಂಡರಾದ ಭೀಮಣ್ಣ ಯಂಗಾಡಿ ಮತ್ತು ನಾಗರಾಜ್ ಹವಳಕೇರಿ ಒತ್ತಾಯಿಸಿದ್ದಾರೆ.