ಲಕ್ಷ್ಮೇಶ್ವರ,ಮೇ30 : ತಾಲೂಕಿನಲ್ಲಿ ಮುಂಗಾರು ಬಿತ್ತನೆಗಾಗಿ ರೈತರು ಮೋಡದತ್ತ ಚಿತ್ತ ಹರಿಸಿದ್ದಾರೆ ಇದುವರೆಗೂ ಹದ ವರ್ತಿ ಮಳೆಯಾಗದಿರುವುದರಿಂದ ಹೊಲಗದ್ದೆಗಳನ್ನು ಹಸನ ಮಾಡಲು ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಏಪ್ರಿಲ್ ತಿಂಗಳಲ್ಲಿ ವಾಡಿಕೆ ಮಳೆ 83.9 ಮಿಲಿ ಮೀಟರ್ ಆಗಬೇಕಾಗಿತ್ತು ಆದರೆ ಇದುವರೆಗೂ ಕೇವಲ 44.8 ಮಿಲಿ ಮೀಟರ್ ಮಳೆಯಾಗಿದ್ದು ಮಳೆಯ ಪ್ರಮಾಣ ಶೇಕಡ 50ರಷ್ಟು ವಾಡಿಕೆ ಮಳೆಗಿಂತ ಕಡಿಮೆಯಾಗಿದೆ.
ತಾಲೂಕಿನಲ್ಲಿ ಒಟ್ಟು 35,670 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ತಾಲೂಕಿನಲ್ಲಿ ಪ್ರಮುಖವಾಗಿ ಗೋವಿನ ಜೋಳ ಹೆಸರು ಶೇಂಗಾ ಮತ್ತು ಹತ್ತಿ ಬೆಳೆಯನ್ನು ಬೆಳೆಯಲಾಗುತ್ತಿದೆ.
ತಾಲೂಕಿನಲ್ಲಿ 10, 660 ಹೆಕ್ಟರ್ ಪ್ರದೇಶದಲ್ಲಿ ಗೋವಿನ ಜೋಳ 3210 ಹೆಕ್ಟರ್ ಪ್ರದೇಶದಲ್ಲಿ ಹೆಸರು 10,000 ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ 11000 ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ.
ಈಗಾಗಲೇ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ 49 . 80 ಕ್ವಿಂಟಲ್ ಹೆಸರು ಬೀಜ 24.60 ಕ್ವಿಂಟಲ್ ತೊಗರಿ ಬೀಜ ಬಿತ್ತನೆಗೆ ದಾಸ್ತಾನು ಸಂಗ್ರಹಿಸಲಾಗಿದೆ ಎಂದು ಸಹಾಯಕಾಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ್ ಹೇಳಿದರು. ಒಟ್ಟು 35, 670 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ 31070 ಹೆಕ್ಟರ್ ಖುಷ್ಕಿ ಬೇಸಾಯ 4,000 ಹೆಕ್ಟರ್ ಪ್ರದೇಶದಲ್ಲಿ ನೀರಾವರಿ ಪ್ರದೇಶದ ಗುರಿಯನ್ನು ಹೊಂದಲಾಗಿದೆ ಎಂದರು.