ಮುಂಗಾರು ಬಿತ್ತನೆ ಆರಂಭ: ರೈತರಿಗೆ ಎಲ್ಲ ಕೃಷಿ ಸವಲತ್ತು ಒದಗಸಲು ಸೂಚನೆ

ನಕಲಿ ಬೀಜ- ರಸಗೊಬ್ಬರ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ
ರಾಯಚೂರು, ಜೂ.೨೩- ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆರಂಭವಾಗಿದ್ದು ರೈತರಿಗೆ ಬೀಜ ಮತ್ತು ರಸಗೊಬ್ಬ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಸಂಬಂಧಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಕುರಿತು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರೈತರ ಬೇಡಿಕೆಯಂತೆ ನಿಗದಿತ ದರದಲ್ಲಿ ರಸಗೊಬ್ಬರ ಮಾರಾಟ ಮಾಡಬೇಕು. ಸಣ್ಣ ರೈತ ಹಾಗೂ ಅತೀ ಸಣ್ಣ ರೈತರಿಗೂ ಗೊಬ್ಬರ ಮತ್ತು ಬೀಜ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಡಿಎಪಿ, ಕಂಪ್ಲೆಕ್ಸ್ ಹಾಗೂ ಯೂರಿಯಾ ರಸಗೊಬ್ಬರ ಹೆಚ್ಚಿನ ರೀತಿಯಲ್ಲಿ ಖೋಟಾ ಆಧಾರದ ಮೇಲೆ ಜಿಲ್ಲೆಯಲ್ಲಿ ಸಂಗ್ರಹಿಸಬೇಕು.
ಕೃಷಿ ಇಲಾಖೆ ಅಧಿಕಾರಿಗಳು ರೈತರ ದೂರುಗಳ ಆಧಾರ ಮೇಲೆ ಕಳಪೆ ಬೀಜ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳಪೆ ಬೀಜ ಮಾರಾಟ ಕಂಡು ಬಂದರೆ ವ್ಯಾಪಾರಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ರೈತರಿಗೆ ಪ್ರಮಾಣೀಕರಿಸಿದ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುವುದರ ಜತೆಗೆ ಕಡ್ಡಾಯವಾಗಿ ರಶೀದಿ ನೀಡಬೇಕು. ಅಲ್ಲದೆ, ಚಾನೆಲ್ ಅಂಗಡಿಗಳಲ್ಲಿ ಸೂಚನಾ ಫಲಕದಲ್ಲಿ ದರ, ದಾಸ್ತಾನು ಇತ್ಯಾದಿ ಸ್ಪಷ್ಟವಾಗಿ ಬರೆಯಬೇಕು. ಒಂದು ವೇಳೆ ನಿಯಮ ಪಾಲನೆ ಮಾಡದೆ ವ್ಯಾಪಾರ ಮಾಡಿದರೆ, ರೈತರಿಂದ ದೂರುಗಳು ಕೇಳಿ ಬಂದರೆ ಅಂತಹ ಅಂಗಡಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆಎಂದರು.
ಬಿತ್ತನೆ ಬೀಜ ಮಾರಾಟದಲ್ಲಿ ಅಕ್ರಮ, ರಸಗೊಬ್ಬರ ವಿತರಣೆಯಲ್ಲಿ ಲೋಪ ದೋಷ ಕಂಡು ಬಂದರೆ ಅಂತಹವರ ವಿರುದ್ಧ ದೂರು ಬಂದರೆ ಶಿಸ್ತ ಕ್ರಮ ಜರುಗಿಸಬೇಕು. ರೈತರಿಗೆ ಸಕಾಲದಲ್ಲಿ ನಿಗದಿತ ದರದಲ್ಲಿ ರಸಗೊಬ್ಬರ ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು
ಮದ್ಯವರ್ತಿಗಳ ಹಾವಳಿ ಇಲ್ಲದೆ ಸೊಸೈಟಿಗಳ ಮುಖಾಂತರ ರೈತರಿಗೆ ನೇರವಾಗಿ ರಸಗೊಬ್ಬರ ತಲುಪಲು ಕ್ರಮವಹಿಸಿ ಎಂದರು.
ಈ ವೇಳೆ ರೈತ ಮುಖಂಡ ಚಾಮರಾಜ ಮಾಲಿಪಾಟೀಲ್ ಮಾತನಾಡಿ ಜಿಲ್ಲೆಗೆ ಡಿಐಪಿ ರಸಗೊಬ್ಬರ ಬಹಳ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ,ಹೆಚ್ಚಾಗಿ ರೈತರು ಯಾವ ಗೊಬ್ಬರವನ್ನು ಪೂರೈಕೆ ಮಾಡುತ್ತಾರೆ ಎಂಬುದನ್ನು ವರದಿ ಮಾಡಿ ನಂತರ ಅದನ್ನು ಸರಕಾರಕ್ಕೆ ವರದಿ ಸಲ್ಲಿಸಿ ಕೋಟಾದ ಆಧಾರದ ಮೇಲೆ ಜಿಲ್ಲೆಗೆ ಬರುವಂತಹ ರಸಗೊಬ್ಬರವನ್ನು ಸೊಸೈಟಿಗಳ ಮುಖಾಂತರ ನಿಗದಿತ ದರದಲ್ಲಿ ರೈತರ ಹಂಚಿಕೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದರಿಂದ ಸೊಸೈಟಿಗಳಲ್ಲಿ ರೈತರಿಗೆ ಸರಿಯಾಗಿ ರಸಗೊಬ್ಬರ ಸಿಗುವುದಿಲ್ಲ ರೈತರಿಗೆ ಗೊಬ್ಬರ ಕೊರತೆಯಾಗದಂತೆ ಸೂಕ್ತ ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ದುರುಗೇಶ ಕೆ. ಆರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಕೃಷಿ ಇಲಾಖೆ ಉಪಕಾರ್ಯದರ್ಶಿ ನಾಯಮ್ ಹುಸೇನ್, ದೀಪಾ ಎಲ್, ಪ್ರಿಯಾಂಕ, ಡಿಡಿಎಲ್‌ಆರ್, ಪಶುಪಾಲನ ಇಲಾಖೆ ಅಧಿಕಾರಿ ಶಿವಣ್ಣ, ಲೀಡ್ ಬ್ಯಾಂಕ್ ಬಾಬು ಬಳಗನೂರು, ರೈತ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.