ಮುಂಗಾರು ಬಿತ್ತನೆಗೆ ಮುಂದಾದ ನೇಗಿಲಯೋಗಿ..!

ಸಂಜೆವಾಣಿ ವಾರ್ತೆ

ಜಗಳೂರು.ಜೂ.೯ -: ಜಗಳೂರು ತಾಲೂಕಿನಲ್ಲಿ ಮಳೆಯ ಆರ್ಭಟದಿಂದ ಅತ್ಯುತ್ಸಾಹದಲ್ಲಿರುವ ತಾಲೂಕಿನ ರೈತರು, ಇದೀಗ ಮತ್ತೂಂದು ಮುಂಗಾರು ಹಂಗಾಮಿಗೆ ಸಿದ್ಧರಾಗಿ ದ್ದಾರೆ.ಅನ್ನದಾತರು ನೇಗಿಲು ಹೊತ್ತು ಹೊಲಗಳತ್ತ ಮುಖ ಮಾಡಿದ್ದಾರೆ.ಕಳೆದ ವರ್ಷ ಸಮರ್ಪಕವಾಗಿ ಮಳೆಯಾದರೂ ಬಿತ್ತಿದ ಬೆಳೆಗೆ ಸೂಕ್ತ ಬೆಲೆ ಸಿಗದೇ ಸಂಕಷ್ಟ ಅನುಭವಿಸಿದ ನೋವಿನಿಂದ ರೈತರು ಇನ್ನೂ ಹೊರಬಂದಿಲ್ಲ. ಮುಂಗಾರು ಮಳೆ ಇನ್ನೂ ಆರಂಭವಾಗದಿದ್ದರೂ ಮುಂಗಾರು ಪೂರ್ವ ಮಳೆ ರೈತರಿಗೆ ಒಂದಿಷ್ಟು ಹರ್ಷ ತಂದಿದೆ. ಇತ್ತೀಚೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ರೈತರು ಚಕ್ಕಡಿ, ಜೋಡೆತ್ತಿನೊಂದಿಗೆ ರಂಟೆ, ಕುಂಟಿ, ನೇಗಿಲು ಸಹಿತ ಹೊಲ ಹರಗಿ ಹದಗೊಳಿಸಿ ಜೋಡೆತ್ತು ಗಳೊಂದಿಗೆ ಬಿತ್ತನೆ ಮಾಡುತ್ತಿದ್ದಾರೆ.ಹವಾಮಾನ ಇಲಾಖೆ ಕಳೆದ ಬಾರಿ ಕೃಷಿ ಇಲಾಖೆಯ ಲೆಕ್ಕಾ ಚಾರ ತಲೆ ಕೆಳಗಾಗುವಂತೆ ಮಾಡಿದೆ. ಆದರೆ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಮಳೆ ಉತ್ತಮವಾಗಲಿದೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ ಕೃಷಿ ಚಟುವಟಿಕೆ ಚುರುಕುಗೊಳ್ಳಲು ಪುಷ್ಠಿ ನೀಡಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಉತ್ತಮ ಮಳೆಯಾದರೆ ಮುಂಗಾರು ಹಂಗಾಮಿನಲ್ಲಿ ಅಂದಾಜು 54 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತದೆ.ಇನ್ನೊಂದೆಡೆ ಪ್ರಸ್ತುತ ಮಳೆ ಆರಂಭವಾಗಿದ್ದರಿಂದ ಹೊಲ ಹದಗೊಳಿಸಿ ರೈತರು ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇನ್ನು ರೈತರ ಒಡನಾಡಿ ಎತ್ತುಗಳಿಗೆ ಭಾರೀ ಬೇಡಿಕೆ ಬಂದಿದೆ.ಸಂತೆಯಲ್ಲಿ ಸೀಮೆ ಎತ್ತು ಮತ್ತು ಜವಾರಿ ಎತ್ತುಗಳು 80 ಸಾವಿರದಿಂದ. 1 ಲಕ್ಷ ರೂ. ವರೆಗೂ ಮಾರಾಟವಾದವು.ಟ್ರ್ಯಾಕ್ಟರ್ ಇನ್ನಿತರ ಯಂತ್ರಗಳನ್ನು ಅವಲಂಬಿಸಿದ ಕೃಷಿ ವಲಯದಲ್ಲಿ ಬಿತ್ತನೆ ಮತ್ತಿತರ ಕೃಷಿ ಚಟುವಟಿಕೆಗೆ ಎತ್ತುಗಳು ತೀರಾ ಅವಶ್ಯಕ.ಹೀಗಾಗಿ,ಬೆಲೆ ಲೆಕ್ಕಿಸದೇ ರೈತರು ಜಮೀನು ಉಳಿಮೆ ಮಾಡಲು ಎತ್ತುಗಳನ್ನು ಖರೀದಿ ಮಾಡಿ ರೈತರು ತಮ್ಮ ಹೊಲದಲ್ಲಿ ಬಿತ್ತನೆಗೆ ಮುಂದಾಗಿ ದ್ದಾರೆ.ವಾಣಿಜ್ಯ ಬೆಳೆಗಳಾದ ಹೆಸರು, ಹತ್ತಿ.ಗೋವಿನ ಜೋಳ, ಸಜ್ಜೆ, ಹೈಬ್ರೀಡ್ ಜೋಳ, ತೊಗರಿ ಸೇರಿದಂತೆ ಇತ್ಯಾದಿ ಬೆಳೆಗಳ ಬಿತ್ತನೆಯಲ್ಲಿ ತಲ್ಲೀನರಾಗಿದ್ದಾರೆ.ಈ ತಿಂಗಳಲ್ಲಿ ಮುಂಗಾರು ರಾಜ್ಯಕ್ಕೆ ಕಾಲಿಡಲಿದೆ. ಜೊತೆಗೆ ಈ ಬಾರಿ ಉತ್ತಮ ಮಳೆಯಾಗ ಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿ ರೈತ ವಲಯ ದಲ್ಲಿ ಸಂತಸಕ್ಕೆ ಕಾರಣವಾಗಿದೆ. ಕೃಷಿ ಚುಟುವಟಿಕೆ ಚುರುಕು ಗೊಳ್ಳಲು ಸಹಕಾರಿಯಾಗಿದೆ.