ಮುಂಗಾರು ಪೂರ್ವ ಸಿದ್ಧತೆ ಸಭೆರಾಜಕಾಲುವೆಗಳ ಸ್ವಚ್ಚತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಟಿ. ಭೂಬಾಲನ್

ಸಂಜೆವಾಣಿ ವಾರ್ತೆ,
ವಿಜಯಪುರ, ಮೇ.22: ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಮುಂಗಾರು ಪೂರ್ವ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಇಲಾಖಾ ಅಧಿಕಾರಿಗಳು ಸನ್ನದರಾಗಬೇಕು. ನಗರ ಹಾಗೂ ಪಟ್ಟಣ, ಹಳ್ಳಿಗಳಲ್ಲಿರುವ ರಾಜಕಾಲುವೆಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಜರುಗಿದ ಬರಪರಿಸ್ಥಿತಿ ಹಾಗೂ ಮುಂಗಾರು ಪೂರ್ವ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್, ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆ ಆಗುವ ಸಂಭವ ಇದೆ. ನಗರ ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಚರಂಡಿ ಹಾಗೂ ರಾಜಕಾಲುವೆಗಳನ್ನು ಸ್ವಚ್ಚತೆ ಮಾಡಬೇಕು. ಯಾವುದೇ ಕಾರಣಕ್ಕೂ ರಸ್ತೆ ಹಾಗೂ ಮನೆಗಳ ಒಳಗೆ ಮಳೆನೀರು ನುಗ್ಗದಂತೆ ನೋಡೊಕೊಳ್ಳಬೇಕು ಎಂದರು.
ಪ್ರವಾಹ ಪರಿಸ್ಥಿತಿ ಉಂಟಾದರೆ ಯಾವುದೇ ರೀತಿಯ ಜೀವ ಹಾನಿಯಾಗದಂತೆ ತಡೆಯಲು ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಮುನ್ನೆಚ್ಚರಿಕೆಯಾಗಿ ಅಲ್ಲಿ ಅಗತ್ಯ ಸಿದ್ಧತೆಗಳಾದ ದೋಣಿ, ಲೈಪ್ ಜಾಕೆಟ್, ಹಾಗೂ ನುರಿತ ಈಜುಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಿಡಿಲು ಆಘಾತ ತಡೆಗಟ್ಟಿ:
ಮಳೆ, ಗುಡುಗು, ಮಿಂಚು ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಜೀವ ಹಾನಿಯಾಗದಂತೆ ತಡೆಯಲು ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಕೈಗೊಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಿಡಿಲಿನ ಆಘಾತದ ಬಗ್ಗೆ ಜನ ಜಾನುವಾರು ಜೀವಹಾನಿ ತಪ್ಪಿಸಲು ಎಲ್ಲ ತಹಶೀಲ್ದಾರರು, ತಾ.ಪಂ. ಇಓಗಳು, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಧ್ವನಿವರ್ಧಕ ಬಳಸಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತ ಸಂಬಂಧಿತ ಎಲ್ಲ ಸಂಘ, ಸಂಸ್ಥೆಗಳಲ್ಲಿ ಮಳೆ, ಗುಡುಗು, ಮಿಂಚಿನಿಂದ ತಪ್ಪಿಸಿಕೊಳ್ಳುವ ಮುಂಜಾಗೃತ ಕ್ರಮಗಳ ಬಗ್ಗೆ ಪ್ರಚಾರ ಮಾಡಬೇಕು. ಮಳೆ ಬಂದಾಗ ರೈತರು ಹೊಲ, ಗದ್ದೆಗಳ ಬಯಲಲ್ಲಿ ಇರದೆ ಸುರಕ್ಷತಾ ಸ್ಥಳದಲ್ಲಿರಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಕೆರೆಗಳು ಭರ್ತಿಯಾಗುವ ಹಾಗೂ ದುರ್ಬಲ ಬಂಡ/ಬದುಗಳನ್ನು ಮುಂಜಾಗೃತವಾಗಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಈಗಲೇ ದುರಸ್ಥಿ ಕಾರ್ಯ ಕೈಗೊಳ್ಳಬೇಕೆಂದರು.
ಹೆಸ್ಕಾಂ ಅಧಿಕಾರಿಗಳು ಅಪಾಯಕಾರಿ ವಿದ್ಯುತ್ ಕಂಬಗಳ ಬಗ್ಗೆ ಈಗಲೇ ಗಮನ ವಹಿಸಿ, ಸ್ಥಳಾಂತರಗೊಳಿಸಬೇಕು. ಹಳೆಯ ಮರಗಳ ಕೊಂಬೆಗಳು ಮುರಿದು ವಿದ್ಯುತ್ ತಂತಿಗಳ ಮೇಲೆ ಬೀಳುವುದನ್ನು ತಪ್ಪಿಸಬೇಕು. ಅಂತಹ ರಂಬೆ ಕೊಂಬೆಗಳನ್ನು ಕತ್ತರಿಸಬೇಕು ಎಂದರು.
ವಿದ್ಯುತ್ ಸಂಪರ್ಕದಿಂದ ಯಾವುದೇ ಅನಾಹುತಗಳು ಆಗದಂತೆ ವಿವಿಧ ಸ್ಥಳಗಳನ್ನು ಗುರುತಿಸಿ, ಈಗಲೇ ಕ್ರಮಕೈಗೊಳ್ಳತಕ್ಕದ್ದು , ಎಲ್ಲ ತಾಲೂಕಾ ಟಾಸ್ಕ್ ಫೆÇೀರ್ಸ್ ಗಳು ಈಗಾಗಲೇ ಮುಂಜಾಗೃತೆಯಾಗಿ ಸಿದ್ಧಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ರಿಶಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.