
ಸಂಜೆವಾಣಿ ವಾರ್ತೆ
ಹೊಸಪೇಟೆ ಜು5: ಪ್ರಸಕ್ತ ಸಾಲಿನ ಮುಂಗಾರು ಆರಂಭಗೊಳ್ಳುತ್ತಿದ್ದು, ಕೃಷಿ ಇಲಾಖೆ ವತಿಯಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ನೀಡುವ ಜೊತೆಗೆ ಯೋಜನೆಗಳ ಸಮರ್ಪಕ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾದ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ’ ಹಾಗೂ ಜಲಾನಯನ ಅಭಿವೃದ್ಧಿ ಘಟಕ-2.0’ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಚಟುವಟಿಕೆಗಳು ಆರಂಭಗೊಳ್ಳಲಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮವಹಿಸಬೇಕು. ಪೂರೈಕೆಯಲ್ಲಿ ಹಾಗೂ ದರವ್ಯತ್ಯಾಸ ಉಂಟಾದಲ್ಲಿ ಅದರ ನಿಖರ ಕಾರಣವನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ರೈತರಿಗೆ ತಲುಪಲು ಕ್ರವಹಿಸುವ ಜೊತೆಗೆ ಇ-ಕೆವೈಸಿ ಹಾಗೂ ಬೆಳೆ ವಿಮೆ ನೋಂದಣಿಗೆ ಸಂಬಂಧಿಸಿದಂತೆ ನಿಗದಿತ ಗುರಿ ತಲುಪಬೇಕು. ಜೊತೆಗೆ ತಾಲ್ಲೂಕು ವ್ಯಾಪ್ತಿಯ ಶಾಸಕರ ಜೊತೆಗೂ ಸಮನ್ವಯತೆ ಹೊಂದಿ ರೈತರ ಹಾಗೂ ಯೋಜನೆಗಳ ಮಾಹಿತಿಯನ್ನು ಕಾಲಕಾಲಕ್ಕೆ ನೀಡಬೇಕು ಎಂದರು.
ರಸಗೊಬ್ಬರ ಖರೀದಿಗೆ ಬರುವ ರೈತರಿಗೆ ದರಪಟ್ಟಿ ಒಳಗೊಂಡಂತೆ ಗೊಬ್ಬರಗಳ ಮಾಹಿತಿ ಒಳಗೊಂಡ ಫಲಕಗಳನ್ನು ಅಂಗಡಿಗಳಲ್ಲಿ ಹಾಕಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರೇಗ್ ಪಾಯಿಂಟ್ ಸ್ಥಾಪನೆ:
ವಿಜಯನಗರ ಜಿಲ್ಲೆಗೆ ಬಳ್ಳಾರಿ, ದಾವಣಗೆರೆ ಹಾಗೂ ಕೊಪ್ಪಳ ಮಾರ್ಗವಾಗಿ ರಸಗೊಬ್ಬರ ಬರುವ ಕಾರಣ ಸಾರಿಗೆ ವೆಚ್ಚದ ಹೆಚ್ಚಳವಾಗಿ ಅನ್ಯ ಜಿಲ್ಲೆಗಿಂತ ರಸಗೊಬ್ಬರ ದರ ಅಧಿಕವಾಗಲಿದ್ದು, ವಿಜಯನಗರ ಜಿಲ್ಲೆಯ ರೈಲ್ವೆ ನಿಲ್ದಾಣ ಗುರುತಿಸಿ ರೇಗ್ ಪಾಯಿಂಟ್ ಸ್ಥಾಪಿಸಿದರೆ ರಸಗೊಬ್ಬರಕ್ಕೆ ತಗುಲುವ ಹೆಚ್ಚುವರಿ ಸಾರಿಗೆ ವೆಚ್ಚ ತಗ್ಗುತ್ತದೆ. ಈ ಬಗ್ಗೆ ರೈಲ್ವೆ ಇಲಾಖೆ ಹಾಗೂ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಯೋಜನಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ತಿಮ್ಮಪ್ಪ ಸೇರಿದಂತೆ ಕೃಷಿ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಚಾರ ವಾಹಿನಿಗೆ ಚಾಲನೆ:
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಸಂಬಂಧಿಸಿದಂತೆ ರೈತರಿಗೆ ಬೆಳೆ ವಿಮೆ ಕುರಿತು ಮಾಹಿತಿ ನೀಡುವ ಪ್ರಚಾರ ವಾಹಿನಿಗೆ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಚಾಲನೆ ನೀಡಿದರು. ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮಗಳಲ್ಲಿ ಪ್ರಚಾರ ವಾಹಿನಿ ಸಂಚರಿಸಿ ವಿವಿಧ ಬೆಳೆಗಳಿಗೆ ನೀಡಲಾಗುವ ವಿಮೆ ಕುರಿತು ಮಾಹಿತಿ ನೀಡಲಿದೆ.