ಮುಂಗಾರು ಅಧಿವೇಶನದಲ್ಲಿ ಯುಸಿಸಿ ಜಾರಿಗೆ ಸಿದ್ಧತೆ

ನವದೆಹಲಿ,ಜೂ.೩೦:ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂಬರುವ ಮಳೆಗಾಲದ ಸಂಸತ್ ಅಧೀವೇಶನದಲ್ಲೇ ಮಂಡಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಏಕರೂಪ ನಾಗರಿಕ ಸಂಹಿತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವ ಬೆನ್ನಲ್ಲೆ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.ಸಂಸತ್‌ನಲ್ಲಿ ಮಸೂದೆ ಮಂಡಿಸುವ ಮುನ್ನೆ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಿ ಏಕರೂಪ ನಾಗರಿಕ ಸಂಹಿತೆಯ ವಿವಿಧ ಮುಖ್ಯಸ್ಥರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.ಬಿಜೆಪಿ ಸಂಸದ ಸುಶೀಲ್ ಮೋದಿ ನೇತೃತ್ವದ ಸಂಸದೀಯ ಮಂಡಳಿ ಸಮಿತಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದೆ. ಈ ಸಮಿತಿಯಲ್ಲಿ ಕಾನೂನು ವ್ಯವಹಾರಗಳ ಇಲಾಖೆ, ಕಾನೂನು ಆಯೋಗಗಳು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ವೈಯಕ್ತಿಕ ಕಾನೂನುಗಳ ಬಗ್ಗೆ ಪರಾಮರ್ಶೆ ನಡೆಸಲಿದೆ.೩೦ ಲೋಕಸಭಾ ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿ ಆಗಸ್ಟ್ ೨೦೧೮ ರಂದು ನಡೆಸಿದ ಚರ್ಚೆಯ ಪ್ರತಿಯನ್ನು ಕಾನೂನು ಆಯೋಗಕ್ಕೆ ನೀಡಲಾಗಿದೆ.ಜುಲೈ ೩ನೇ ವಾರದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಹಳೆಯ ಸಂಸತ್ ಕಟ್ಟಡದಲ್ಲೇ ಅಧಿವೇಶನ ನಡೆಯಲಿದ್ದು, ಕಲಾಪದ ಮಧ್ಯಭಾಗದಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರವಾಗುವ ನಿರೀಕ್ಷೆ ಇದೆ.ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮಧ್ಯಪ್ರದೇಶದಲ್ಲಿ ಚಾಲನೆ ನೀಡಿದ ಬಳಿಕ ಪ್ರಧಾನಿ ಅವರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ತರುವ ಕುರಿತು ಪ್ರಸ್ತಾಪಿಸಿದ್ದರು. ಎರಡೂ ಕಾನೂನುಗಳ ಮೇಲೆ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಅವರು ಉಲ್ಲೇಖಿಸಿದ್ದರು.
ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸೂಚನೆ ನೀಡಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಪ್ರಕ್ರಿಯೆಗೆ ಚಾಲನೆ ನೀಡಿದೆ.ಜು.೩ ರಂದು ನಡೆಯಲಿರುವ ಮಂತ್ರಿ ಪರಿಷತ್ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಲು ಕೇಂದ್ರಸರ್ಕಾರ ಮುಂದಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿರುವ ಬಿಜೆಪಿ ವಿರುದ್ಧ ಇನ್ನಷ್ಟು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದೆ ಎಂದು ಕಿಡಿಕಾರಿದೆ.ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿರುವ ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಸಮಾಜವಾದಿ ಪಕ್ಷ, ಸಿಪಿಐಎಂ, ಸಿಪಿಎಂ ಪಕ್ಷಗಳು ಉಗ್ರವಿರೋಧ ವ್ಯಕ್ತಪಡಿಸಿವೆ.ಮುಂಬರುವ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ೨೦೨೪ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿದೆ.

ಕಾನೂನು ಆಯೋಗಕ್ಕೆ ಸಮನ್ಸ್
ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತಂತೆ ಕಾನೂನು ಮತ್ತು ನ್ಯಾಯದ ಸಂಸದೀಯ ಸಮಿತಿ ಕಾನೂನು ಆಯೋಗಕ್ಕೆ ಜು. ೩ ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಅವರು ವಿಷಯ ಪ್ರಸ್ತಾಪಿಸಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದ್ದು, ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ದ್ವಂದ್ವ ಕಾನೂನುಗಳೊಂದಿಗೆ ದೇಶವು ಹೇಗೆ ಕಾರ್ಯನಿರ್ವಹಿಸಬಹುದು ಎಂದು ಪ್ರಶ್ನಿಸಿದ್ದರು.