ಮೀಸಲಾತಿ ಹೋರಾಟ, ಸ್ವಾಮೀಜಿಗಳಿಗೆ ಬೆಂಬಲಿಸಲು ಮನವಿ

ವಿಜಯಪುರ, ಜು. ೧೬: ಕಳೆದ ೧೫೧ ದಿನಗಳಿಂದ ನಾಯಕ ಜನಾಂಗಕ್ಕಾಗಿ, ಮೀಸಲಾತಿ ಹೆಚ್ಚಳಕ್ಕಾಗಿ ಆಗ್ರಹಿಸಿ, ಧರಣಿ ನಡೆಸುತ್ತಿರುವ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿರವರಿಗೆ ಎಲ್ಲಾ ಶ್ರೀ ವಾಲ್ಮೀಕಿ ಸಂಘದ ನಾಯಕ ಜನಾಂಗದ ಮುಖಂಡರುಗಳು ಒತ್ತಾಸೆಯಿಂದ ಬೆಂಬಲ ಸೂಚಿಸಬೇಕೆಂದು ಇಲ್ಲವಾದಲ್ಲಿ ಅಧಿಕಾರ ತೊರೆಯಬೇಕೆಂದು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎಲೆ ಮುನಿರಾಜು ತಿಳಿಸಿದರು.
ಅವರು ಇಲ್ಲಿನ ೯ ನೇ ವಾರ್ಡ್‌ನ ವಾಲ್ಮೀಕಿ ಉದ್ಯಾನವನದಲ್ಲಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಏರ್ಪಡಿಸಿದ್ದ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್‌ರವರ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದ ಎಲ್ಲಾ ಮುಖ್ಯ ಮಂತ್ರಿಗಳು ಮಾತು ತಪ್ಪಿದ್ದು, ಈಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿರವರು ಮಾತು ತಪ್ಪಿದಲ್ಲಿ ಎಸ್.ಸಿ/ಎಸ್.ಟಿ ಜನಾಂಗದ ೧೫೧ ಜಾತಿಗಳ ಜನತೆ ರಾಜ್ಯದಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ನೂರಾರು ವರ್ಷಗಳಿಂದಲೂ ನಮ್ಮನ್ನು ಗುಲಾಮರಾಗಿ ನೋಡುತ್ತಿದ್ದು, ೧೦-೧೨ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ನಾವು ಗುಲಾಮರಾಗಿ ಉಳಿಯದೇ, ಸರಕಾರಕ್ಕೆ ಮುಂದಿನ ದಿನಗಳಲ್ಲಿ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗಳಿಗೆ ಇದೀಗ ನೀಡಿರುವ ಶೇ.೧೫ ಮೀಸಲಾತಿಯನ್ನು ೧೭ ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಶೇ.೩ ಮೀಸಲಾತಿಯನ್ನು ಶೇ.೭ ಕ್ಕೆ ಏರಿಸಬೇಕೆಂದು, ಒತ್ತಾಯಿಸಿದರು.
ವಾಲ್ಮೀಕಿ ಮಹರ್ಷಿಗಳ ಪುತ್ಥಳಿಗೆ ಪುಷ್ಪಾಲಂಕಾರ ನೆರವೇರಿಸಿ ಎಲ್ಲಾ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ವಾಲ್ಮೀಕಿ ಸಂಘದ ಅಧ್ಯಕ್ಷರಾದ ಎಲ್.ಶ್ರೀರಾಮ್,.ಉಪಾಧ್ಯಕ್ಷರಾದ ಓಂಶಕ್ತಿ ಮುನಿಕೃಷ್ಣಪ್ಪ, ಸಂಘದ ಗೌರವ ಅಧ್ಯಕ್ಷ ರಾದ ಟಿ.ಸಿ. ನಾರಾಯಣಸ್ವಾಮಿ, ಸಂಘದ ಸದಸ್ಯರಾದ ಎಲೆ ಪಾಂಡು, ತರಕಾರಿ ಮುನಿರಾಜು, ಪುರಸಭಾ ಸದಸ್ಯರಾದ ಸಿ ಎಂ ರಾಮು, ಯುವಕ ಸಂಘದ ಅಧ್ಯಕ್ಷ ಮಂಜುನಾಥ್, ಉಪಸ್ಥಿತರಿದ್ದರು.