ಮೀಸಲಾತಿ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದೆ: ಸಿದ್ದು ವಾಗ್ದಾಳಿ

ಮೈಸೂರು,ಎ.2:- ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಪುರಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ರವಿವಾರ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಂವಿಧಾನ ಬಚಾವೋ ದೇಶ ಬಚಾವೋ ಮೀಸಲಾತಿಯನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಯ ವಿರುದ್ಧ ಆಯೋಜಿಸಿದ್ದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಚುನಾವಣೆಗಾಗಿ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮೀಸಲಾತಿ ಹೆಸರಿನಲ್ಲಿ ರಾಜ್ಯದ ಜನರಿಗೆ ಮಕ್ಮುಲ್ ಟೋಪಿ ಹಾಕುತ್ತಿದೆ. ಸಾಮಾಜಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಿತ್ತುಹಾಕಿ ಸಂವಿಧಾನ ವಿರೋಧಿ ನಡೆ ಅನುಸರಿಸಿದೆ ಎಂದು ಕಿಡಿಕಾರಿದರು.
ಎಸ್ಸಿ,ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಿ ಕಾನೂನು ಮಾಡಲಾಯಿತು. ಆದರೆ ಅದು ಇನ್ನೂ ಊರ್ಜಿವಾಗಿಲ್ಲ, ಎಸ್ಸಿ ಸಮುದಾಯಕ್ಕೆ 3%, ಎಸ್ಟಿ ಸಮುದಾಯಕ್ಕೆ 4% ಮೀಸಲಾತಿಯನ್ನು ಹೆಚ್ಚಳ ಮಾಡಲಾಯಿತು. ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದು 9ನೇ ಶೆಡ್ಯೂಲ್‍ಗೆ ಸೇರಿಸದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಮುಸ್ಲಿಮರ 2ಬಿ ಮೀಸಲಾತಿಯ 4% ರದ್ದುಗೊಳಿಸಿ ಈ ಎರಡೂ ಸಮುದಾಯಗಳಿಗೆ ಹಂಚಿಕೆ ಮಾಡಿರುವುದು ಎಷ್ಟು ಸರಿ? ಮುಸ್ಲಿಮರ ಮೀಸಲಾತಿ ಕಿತ್ತು ನಮಗೆ ಮೀಸಲಾತಿ ಹೆಚ್ಚಳ ಮಾಡಿ ಎಂದು ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯದವರು ಕೇಳಿದ್ದರೆ ಎಂದು ಪ್ರಶ್ನಿಸಿದರು.
ಎಸ್ಸಿ,ಎಸ್ಟಿ, ಸಮುದಾಯಗಳಿಗೆ ಹೆಚ್ಚಳ ಮಾಡಿರುವ ಮೀಸಲಾತಿ ಬಗ್ಗೆ ಇನ್ನೂ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ 9ನೇ ಶೆಡ್ಯೂಲ್‍ಗೆ ಸೇರಿಸಿಲ್ಲ, ಅಂತಹದರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರಿದಿ ಆಧಾರದ ಮೇಲೆ ಒಳ ಮೀಸಲನ್ನು ನೀಡಿದ್ದಾರೆ. ಶೇ.15 ರ ಮೀಸಲಾತಿಯಂತೆ ಒಳಮೀಸಲು ನೀಡದೆ ಶೆ.17% ರಂತೆ ಹಂಚಿಕೆ ಮಾಡಿದ್ದಾರೆ. ಇದು ಕಾನೂನಿನಲ್ಲಿ ನಿಲ್ಲಲು ಸಾಧ್ಯವೇ? ಏನು ಜನರನ್ನು ಇವರು ಬಕ್ರಾಗಳು ಎಂದು ತಿಳಿದುಕೊಂಡಿದ್ದಾರ ಎಂದು ವಾಗ್ದಾಳಿ ನಡೆಸಿದರು.
ಇದಕ್ಕಾಗಿಯೇ ನಾವು ಬಿಜೆಪಿಯವರು ಸಂವಿಧಾನ ವಿರೋಧಿಗಳು ಎನ್ನುವುದು. ಮಂಡಲ್ ಕಮೀಷನ್ ಆಯೋಗದ ವರಿದಯನ್ನು ವಿರೋಧಿಸಿದ ಇವರ ಮುಖವನ್ನು ಹಿಂದುಳಿದ ವರ್ಗದವರು ನೋಡಬಾರದು. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಮುಂದಾದಾಗ ಇದೇ ಬಿಜೆಪಿಯ ಉಪಾಧ್ಯಕ್ಷರು ಹಾಗೂ ರಾಜ್ಯ ಸಭಾ ಸದಸ್ಯರಾಗಿದ್ದ ರಾಮಾಜೋಯಿಸ್ ವಿರೋಧ ಮಾಡಿ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ದಾಖಲಿಸಿದ್ದರು. ಆಗ ಬಿಜೆಪಿಯ ಒಬ್ಬ ನಾಯಕರು ಮಾತನಾಡಲಿಲ್ಲ. ಈಗ ಏನೊ ಹಿಂದುಳಿದವರ್ಗಗಳ ಅಭಿವೃದ್ಧಿ ನಾವೇ ಮಾಡಿದ್ದು ಎಂಬ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ. ಹಾಗಾಗಿಯೇ ನಾವು ಸಂವಿಧಾನವನ್ನು ಜಾರಿಗೊಳಿಸಿದ್ದೇವೆ. ಸಾಮಾಜಿಕ ಮತ್ತು ಶೆಕ್ಷಣಿಕವಾಗಿ ಹಿಂದುಳಿದವರು ಮತ್ತು ಶೋಷಿಸತ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಅಂಬೇಡ್ಕರ್ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ ಪಕ್ಷ ಸದಾ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿಯ ಹುಟ್ಟುಗುಣವೇ ಸಂವಿಧಾನವನ್ನು ವಿರೋಧಿಸುವುದು. ಆರ್.ಎಸ್.ಎಸ್. ಸ್ಥಾಪಕ ಹೆಗಡೆ ವಾರ್, ಗೋಳ್ವಾಲ್ಕರ್ ಮತ್ತು ಸಾವರ್ಕರ್ ಅವರ ಆರ್ಗನೈಸರ್ ಪತ್ರಿಕೆಯಲ್ಲಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ವಿರೋಧಿಸಿ ಮನು ಸಂವಿಧಾನ ಜಾರಿಯಾಗಬೇಕು ಎಂದು ಹೇಳಿದ್ದಾರೆ. ಮನುವಾದಿಗಳು ಹಿಂದುಳಿದವರಿಗೆ ಪಾಠ ಹೇಳಿಕೊಡಲು ಬಿಡಲಿಲ್ಲ. ಇಂತಹವರು ಹಿಂದುಳಿದ ವರ್ಗಗಳವರನ್ನು ಉದ್ಧಾರ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನಾವು ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡಿ 9ನೇ ಶೆಡ್ಯೂಲ್‍ಗೆ ಸೇರಿಸಿ ಎಲ್ಲರಿಗೂ ಮೀಸಲಾತಿ ನೀಡುತ್ತೇವೆ. ಬಿಜೆಪಿಯವರ ಮೋಸದ ಬಗ್ಗೆ ನೀವುಗಳು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.
ಧರಣಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಶಾಸಕರುಗಳಾದ ತನ್ವೀರ್ ಸೇಠ್, ಝಮೀರ್ ಅಹಮದ್, ಪುಟ್ಟರಂಗಶೆಟ್ಟಿ, ಡಾ.ಯತೀಂದ್ರ ಸಿದ್ಧರಾಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ,ಮಾಜಿ ಶಾಸಕರುಗಳಾದ ಎಂ.ಕೆ.ಸೋಮಶೇಖರ್, ಎ.ಆರ್.ಕೃಷ್ಣಮೂರ್ತಿ, ವಾಸು,ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಡಿ.ರವಿಶಂಕರ್, ಶಿವಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂತಿ, ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಮೇಯರ್ ಪುರುಷೋತ್ತಮ್, ಚಂದ್ರಮೌಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.