ಮೀಸಲಾತಿ ಹೆಚ್ಚಿಸಿದರೆ ಸಾಲದು, ಅವರ ಹಕ್ಕುಗಳನ್ನು ಈಡೇರಿಸಬೇಕು: ಪ್ರೊ. ಪೋತೆ

ಕಲಬುರಗಿ,ನ.23: ಮೀಸಲಾತಿ ಹೆಚ್ಚಿಸಿದರೆ ಸಾಲದು, ಅವರ ಹಕ್ಕುಗಳನ್ನು ಈಡೇರಿಸಬೇಕು. ಮತದಾನದ ಹಕ್ಕನ್ನು ಕೊಟ್ಟ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೆಶಕ ಪ್ರೊ. ಹೆಚ್.ಟಿ. ಪೋತೆ ಅವರು ಹೇಳಿದರು.
ನಗರದ ಕೆಪಿಇ ಶಿಕ್ಷಣ ಸಂಸ್ಥೆಯ ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಬುಧವಾರ 2022-2023ನೇ ಶೈಕ್ಷಣಿಕ ಸಾಲಿನ ಡಾ. ಅಂಬೇಡ್ಕರ್ ವಿಚಾರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ಜಗತ್ತಿನಲ್ಲಿ ಅತೀ ಹೆಚ್ಚು ಜ್ಞಾನ ಪಡೆದ ವ್ಯಕ್ತಿ. ಭಾರತ ದೇಶಕ್ಕೆ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಬೇಕೆಂದು ಡಾ. ಅಂಬೇಡ್ಕರ್ ಅವರು ಪ್ರತಿಪಾದಿಸಿದರು ಎಂದರು.
ಲಂಡನ್‍ನಲ್ಲಿ ಜರುಗಿದ ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಭಾರತ ದೇಶದ ಏಕೈಕ ವ್ಯಕ್ತಿ ಡಾ. ಅಂಬೇಡ್ಕರ್ ಅವರು. ದೇಶದ ಹಿತಕ್ಕಾಗಿ ತನ್ನ ಕುಟುಂಬದ ಹಿತವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿ. ಜಗತ್ತಿನ ಅತೀ ದೊಡ್ಡ ಅಹಿಂಸಾವಾದಿಯಾಗಿದ್ದಾರೆ ಎಂದು ಅವರು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ತ್ಯಾಗ ಬಲಿದಾನದಿಂದ ದೇಶ ಇಂದು ಸಮೃದ್ಧವಾಗಿದೆ ಹಾಗೂ ವಿವಿಧತೆಯಲ್ಲಿ ಏಕತೆ ಹೊಂದಿದ ತಳ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿದರೆ ಅಷ್ಟೇ ಸಾಲದು, ಅವರ ಹಕ್ಕುಗಳನ್ನು ಇಡೇರಿಸಬೇಕು. ಬಾಬಾಸಾಹೇಬ್ ಅವರನ್ನು ಓದಿದರೆ ಭಾರತದ ನಿಜವಾದ ಇತಿಹಾಸ, ಸಂಸ್ಕøತಿ ಮತ್ತು ಪರಂಪರೆಯನ್ನು ಅರಿಯಬಹುದು. ವಿದ್ಯಾರ್ಥಿಗಳಾದ ನೀವು ಅಂಬೇಡ್ಕರ್ ಅವರ ವಿಚಾರಗಳನ್ನು ಹೆಚ್ಚೆಚ್ಚು ಓದಬೇಕು. ನಿಮಗಾಗಿ ನೀವು ವಿಚಾರವಂತರಾಗಿ ಭಾರತ ದೇಶವನ್ನು ಪ್ರಬುದ್ಧ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಅವರು ಮಾತನಾಡಿ, 1935ರಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್‍ನ ಸ್ಥಾಪನೆಗೆ ಡಾ. ಅಂಬೇಡ್ಕರ್ ಅವರು ಕಾರಣರು. ಬಹುದೊಡ್ಡ ಆರ್ಥಿಕ ತಜ್ಞರು. ಅವರ ವಿಚಾರಗಳು ಜಗತ್ತನ್ನು ಆಳುತ್ತಿವೆ. ವಿದ್ಯಾರ್ಥಿಗಳಾದ ನೀವು ಅಂತಹ ವಿಚಾರವಂತರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಚಂದ್ರಶೇಖರ್ ಶೀಲವಂತರ್ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರು ತಮ್ಮ ಜ್ಞಾನದಿಂದ ಇಡೀ ಜಗತ್ತಿಗೆ ಪರಿಚಯವಾಗಿದ್ದಾರೆ. ಮಹಿಳಾ ಸಬಲೀಕರಣ ಆರ್ಥಿಕ, ನೀರಾವರಿ, ರಾಜಕೀಯ ತತ್ವಜ್ಞಾನಿಯಾಗಿ ನಮ್ಮ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದೇವೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ವಿಜಯಕುಮಾರ್ ಡಿ., ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಚಾರಗಳು ಜಗತ್ತನ್ನು ಆಳುತ್ತವೆ. ಅದಕ್ಕಾಗಿ ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಡಾ. ಅಂಬೇಡ್ಕರ್ ವಿಚಾರ ವೇದಿಕೆಯ ಸಂಯೋಕ ಡಾ. ಗಾಂಧೀಜಿ ಮೋಳಕೆರೆ ಅವರು ವಂದಿಸಿದರು. ಡಾ. ರಾಜಕುಮಾರ್ ಮಾಳಗೆ ಅವರು ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಪ್ರೊ. ಸಿದ್ದಪ್ಪ ಕಾಂತಾ, ಡಾ. ಹರ್ಷವರ್ಧನ್ ಬಿ., ಡಾ. ಪೀರಪ್ಪ ಸಜ್ಜನ್ ಮುಂತಾದವರು ಉಪಸ್ಥಿತರಿದ್ದರು.