ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ,ನ.1- ಪರಿಶಿಷ್ಟ ಪಂಗಡದವರಿಗೆ ಸರ್ಕಾರ ಸದ್ಯ ನೀಡುತ್ತಿರುವ ಶೇ.3 ಮೀಸಲಾತಿಯನ್ನು ಶೇ.7.5ರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಶನಿವಾರ ತಾಲ್ಲೂಕು ವಾಲ್ಮೀಕಿ ನಾಯಕ ವೇದಿಕೆ ಸದಸ್ಯರು ತಹಶೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ಚಂದ್ರು ತಳವಾರ ಮಾತನಾಡಿ ‘ವಾಲ್ಮೀಕಿ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಕಳೆದ 42 ವರ್ಷಗಳಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಲ್ಲ. ಕಾರಣ ಸರ್ಕಾರ ಕೂಡಲೇ ನ್ಯಾ.ನಾಗಮೋಹನದಾಸ್ ವರದಿಯನ್ನು ಅನುಮೋದಿಸುವ ಮೂಲಕ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಿ ಸಮಾಜದ ನಿರುದ್ಯೋಗಿ ಯುವ ಜನತೆಗೆ ಅನುಕೂಲ ಮಾಡಿಕೊಡಬೇಕು’ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರು ತಳವಾರ, ಪ್ರಕಾಶ ಬೆಂತೂರ, ರಾಜಶೇಖರ ಮೇಲ್ಮರಿ, ಕಲ್ಲಪ್ಪ ಗಂಗಣ್ಣವರ, ರಾಮಣ್ಣ ಕಲಕೋಟಿ, ಫಕ್ಕೀರಪ್ಪ ಕುಸಲಾಪುರ, ಹನಮಂತ ಜಾಲಿಮರದ, ಭೀಮಪ್ಪ ಯಂಗಾಡಿ, ಶಿವಣ್ಣ ಕರಡಿ, ಮಂಜುನಾಥ ಶಿರಹಟ್ಟಿ, ಎಚ್.ಬಿ. ಕಾಶಿಕೋವಿ ಇದ್ದರು.