ಮೀಸಲಾತಿ: ಸರ್ಕಾರದ ಕ್ರಮ ಖಂಡನೀಯ

ಲಕ್ಷ್ಮೇಶ್ವರ,ಏ16 : ಒಳಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರಕ್ಕೆ ಶಿಪಾರಸ್ಸು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶನಿವಾರ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳ ನ್ಯಾ.ಸದಾಶಿವ ಆಯೋಗದ ವರದಿ ಹಾಗೂ ಒಳಮೀಸಲಾತಿ ವರದಿ ಜಾರಿ ವಿರೋಧಿ ಒಕ್ಕೂಟದ ಸದಸ್ಯರು ಆದರಹಳ್ಳಿ ಗವಿಸಿದ್ದೇಶ್ವರಮಠದ ಡಾ.ಕುಮಾರ ಮಹಾರಾಜ ಸ್ವಾಮೀಜಿಯವರ ನೇತೃತ್ವದಲ್ಲಿ
ಪ್ರತಿಭಟನೆ ನಡೆಸಿ ತಹಶೀಲ್ದಾರ ಆನಂದಶೀಲ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿನ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ
ಜಮಾಯಿಸಿದ ಬಂಜಾರ, ಕೊರಮ, ಕೊರಚ, ಭೋವಿ, ಚಲವಾದಿ, ಮುಸ್ಲಿಂ ಜನಾಂಗದ ನೂರಾರು ಜನರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಆದಯ್ಯ ವರ್ತುಲ, ಹೊಸ ಬಸ್ ನಿಲ್ದಾಣ, ಶಿಗ್ಲಿ ಕ್ರಾಸ್, ಪುರಸಭೆ ಮೂಲಕ ಸಂಚರಿಸಿದ ಮೆರವಣಿಗೆಯು ಸೋಮೇಶ್ವರ ಪಾದಗಟ್ಟಿ ಹತ್ತಿರ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.
ಡಾ.ಕುಮಾರ ಮಹಾರಾಜರು ಮಾತನಾಡಿ `ಸರ್ಕಾರ ಒಳಮೀಸಲಾತಿಯನ್ನು ಜಾರಿಗೆ ತರುವ ಮೂಲಕ ದಲಿತರಲ್ಲಿ ಒಡಕನ್ನು ಹುಟ್ಟಿಸುವ ಹುನ್ನಾರ ಮಾಡುತ್ತಿದೆ. ದಿನಾಲೂ ಕೂಲಿ ಮಾಡಿ ಬದುಕು ಸಾಗಿಸುವ ಮೇಲಿನ ಜಾತಿ ಜನರಿಗೆ ನ್ಯಾಯಯುತವಾಗಿ ನೀಡಿದ್ದ ಮೀಸಲಾತಿಯನ್ನು ರದ್ದು ಪಡಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಮೇಲಿನ ಎಲ್ಲ ಜಾತಿಯ ಜನರು ಅತ್ಯಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮೀಸಲಾತಿಯಿಂದ ಅವರಿಗೆ ಅನುಕೂಲ ಆಗಿತ್ತು. ಆದರೆ ಇದೀಗ ಸರ್ಕಾರ ಒಳಮೀಸಲಾತಿ ತರಲು ಸಂಚು ರೂಪಿಸುತ್ತಿದೆ. ಅದರೊಂದಿಗೆ ನ್ಯಾ.ಸದಾಶಿವ ಆಯೋಗದ ವರದಿಯನ್ನೂ ಸಹ ಜಾರಿಗೆ ತರಲು ಹೊರಟಿರುವುದು ನೋವಿನ ಸಂಗತಿಯಾಗಿದೆ. ಇದರೊಂದಿಗೆ ಮುಸ್ಲಿಂ ಜನಾಂಗಕ್ಕೆ ಇದ್ದ ಮೀಸಲಾತಿಯನ್ನು ತೆಗೆದು ಹಾಕಿದ್ದು ಖಂಡನೀಯ ಎಂದರು.

ಬಂಜಾರ ಸಮಾಜದ ಮುಖಂಡ ಚಂದ್ರಕಾಂತ ಚವ್ಹಾಣ ಮಾತನಾಡಿ ಒಳಮೀಸಲಾತಿ ಜಾರಿಗೆ ತರುವುದರಿಂದ ಎಸ್‍ಸಿ ಜನಾಂಗದಲ್ಲಿ ಒಡಕು ಮೂಡಿ ಒಳ ಜಗಳಗಳು ಶುರುವಾಗಿ ಸಮಾಜದ ಶಾಂತಿಗೆ ಭಂಗ ಉಂಟಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯ್ಕೆ ಆಗುವಲ್ಲಿ ಬಂಜಾರ ಸಮುದಾಯದ ಪಾಲು ಬಹು ದೊಡ್ಡದು ಎಂಬುದನ್ನು ಮರೆಯಬಾರದು ಎಂದರು. ಮುಸ್ಲಿಂ ಸಮಾಜದ ಮುಫ್ತಿಯಾರ್ ಅತಹರ್ ಮಾತನಾಡಿನಮ್ಮ ಜನಾಂಗದ ಮೀಸಲಾತಿಯನ್ನು ಸರ್ಕಾರ ರದ್ದು ಪಡಿಸಿದ್ದು ಖಂಡನೀಯ. ಪ್ರತಿದಿನ ದುಡಿಯದಿದ್ದರೆ ಮುಸ್ಲಿಂರ ಹೊಟ್ಟೆ ತುಂಬುವುದಿಲ್ಲ. ಇಂಥ ಸಂದರ್ಭದಲ್ಲಿ ಇದ್ದ ಮೀಸಲಾತಿಯನ್ನು ಕಸಿದುಕೊಂಡಿರುವುದು ಸರ್ಕಾರದ ಉದ್ಧಟತನವಾಗಿದೆ. ಕಾರಣ ರದ್ದು ಪಡಿಸಿರುವ ಮೀಸಲಾತಿಯನ್ನು ಮತ್ತೆ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಲಕ್ಷ್ಮೇಶ್ವರ ತಾಲ್ಲೂಕು ಬಂಜಾರ ಸಮಾಜದ ಅಧ್ಯಕ್ಷ ಶಿವಣ್ಣ ಲಮಾಣಿ, ಭೋವಿ ಸಮಾಜದ ಜಯಕ್ಕ ಕಳ್ಳಿ, ದಾದಾಪೀರ್ ಮುಚ್ಛಾಲೆ ಮಾತನಾಡಿದರು.
ಈ ಸಂದರ್ಭದಲ್ಲಿ ಈರಣ್ಣ ಚವ್ಹಾಣ, ಸೋಮಣ್ಣ ಲಮಾಣಿ ಹರದಗಟ್ಟಿ, ಗಣೇಶ ನಾಯಕ, ಗಣೇಶ ಲಮಾಣಿ ದೊಡ್ಡೂರು, ಟೋಪಣ್ಣ ಲಮಾಣಿ, ಪುಂಡಲೀಕ ಲಮಾಣಿ, ಶೇಕಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ಕಿರಣ ಲಮಾಣಿ, ಎಂ.ಎಂ. ಗದಗ, ಕರೀಂಸಾಬ್ ಸೂರಣಗಿ, ಜಾಕೀರ್ ಹವಾಲ್ದಾರ, ಖಾಜಾಮೈನುದ್ದೀನ್ ದೊಡ್ಡಮನಿ, ಶಿರಾಜ್ ಡಾಲಾಯತ, ನೂರ್‍ಅಹಮ್ಮದ್ ನಿಡಗುಂದಿ, ಸಿಪಿಐ ವಿಕಾಸ ಲಮಾಣಿ, ಪಿಎಸ್‍ಐ ಡಿ.ಪ್ರಕಾಶ, ಪ್ಲೈಯಿಂಗ್ ಸ್ಕ್ವಾಡ್ ಶಂಕರ ಹುಲ್ಲಮ್ಮನವರ ಇದ್ದರು.