ಮೀಸಲಾತಿ ಸರ್ಕಾರದ ಐತಿಹಾಸಿಕ ಯತ್ನ:ತೇಜಸ್ವಿ

ಬೆಂಗಳೂರು. ಮಾ೨೮: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರಕಾರವು ಕೆಲದಿನಗಳ ಹಿಂದೆ ಮೀಸಲಾತಿ ವಿಚಾರದಲ್ಲಿ ದೀರ್ಘಕಾಲದ ಬೇಡಿಕೆ ಈಡೇರಿಸುವ ಹಾಗೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಆಳಕ್ಕೆ ಒಯ್ಯುವ ಐತಿಹಾಸಿಕ ಪ್ರಯತ್ನ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿರ್ಧಾರದಿಂದ ಇಲ್ಲಿನವರೆಗೆ ಯಾವ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿರಲಿಲ್ಲವೋ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿದೆ. ಒಳ ಮೀಸಲಾತಿ ಘೋಷಣೆ ವಿರೋಧಿಸುವ ಕಾಂಗ್ರೆಸ್ ಧೋರಣೆ ಎಲ್ಲರಲ್ಲಿ ಆಶ್ಚರ್ಯ ತಂದಿದೆ. ಅದು ಅಸಹ್ಯ ತರಿಸುವಂತಿದೆ ಎಂದು ಆಕ್ಷೇಪಿಸಿದರು.
ಅಲ್ಪಸಂಖ್ಯಾತರಿಗೆ ಇದ್ದ, ಮುಸ್ಲಿಂ ಸಮುದಾಯಕ್ಕೆ ಸಂವಿಧಾನಬಾಹಿರವಾಗಿ ಕೊಡುತ್ತಿದ್ದ ಶೇ ೪ ಮೀಸಲಾತಿಯನ್ನು ರದ್ದುಪಡಿಸಿ ಲಿಂಗಾಯತ, ಒಕ್ಕಲಿಗರಿಗೆ ನೀಡಿದ್ದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು. ಮತ್ತೆ ಅಧಿಕಾರಕ್ಕೆ ಬಂದರೆ ಮತ್ತೆ ಶೇ ೪ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಅಚ್ಚರಿ ತರುವಂತಿದೆ ಎಂದು ತಿಳಿಸಿದರು.
ಶೇ ೧೩ರಷ್ಟು ಮುಸ್ಲಿಂ ಸಮುದಾಯ ರಾಜ್ಯದಲ್ಲಿದೆ. ಅದಕ್ಕೆ ಅನುಗುಣವಾಗಿ ಅವರಿಗೆ ಮೀಸಲಾತಿ ಕೊಡುವುದಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಹೇಳುತ್ತಿದ್ದಾರೆ. ಇದು ರಾಜ್ಯದ ಹಿಂದುಳಿದ ಸಮುದಾಯಗಳಿಗೆ ಮಾಡುತ್ತಿರುವ ಅತ್ಯಂತ ಘೋರ ಅನ್ಯಾಯ. ಇದನ್ನು ರಾಜ್ಯದ ಜನತೆ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಪಾರ್ಟಿ ೧೯೫೪ರಿಂದ ಇತಿಹಾಸದುದ್ದಕ್ಕೂ ನಿರಂತರವಾಗಿ ಒಬಿಸಿ ಸಮುದಾಯಗಳ ವಿರುದ್ಧ ಪಿತೂರಿ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದರು.
೧೯೫೪ ಕಾಕಾ ಕಾಲೇಲ್ಕರ್ ಸಮಿತಿ ರಚಿಸಿ ಒಬಿಸಿ ಸಮುದಾಯಗಳ ಹಿತರಕ್ಷಿಸಲು ಒಬಿಸಿ ಆಯೋಗ ರಚಿಸಲು ತಿಳಿಸಿತ್ತು. ಆ ಆಯೋಗಕ್ಕೆ ಸಾಂವಿಧಾನಿಕ ದರ್ಜೆ ಕೊಡಲು ಬೇಡಿಕೆ ಇಡಲಾಗಿತ್ತು. ಅಲ್ಲಿಂದ ೨೦೧೮ರವರೆಗೆ ಕಾಂಗ್ರೆಸ್, ಕಾಂಗ್ರೆಸ್‌ನ ಹಲವು ಬಣ್ಣದ ಸರಕಾರಗಳು ಬಂದರೂ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ದರ್ಜೆ ಕೊಟ್ಟಿರಲಿಲ್ಲ. ೨೦೧೮ರಲ್ಲಿ ಮೋದಿಜಿ ಅವರ ಸರಕಾರ ಸಾಂವಿಧಾನಿಕ ಮಾನ್ಯತೆ ನೀಡಿ ಮಹತ್ವದ ಐತಿಹಾಸಿಕ ನಿರ್ಧಾರ ಮಾಡಿತ್ತು. ಆಗ ಲೋಕಸಭೆಯಲ್ಲಿ ಕಾನೂನನ್ನು ಮಂಡಿಸಿದಾಗ ಕಾಂಗ್ರೆಸ್ ಪಕ್ಷವೂ ಅದನ್ನು ವಿರೋಧಿಸಿತ್ತು ಎಂದು ನೆನಪಿಸಿದರು.
ಬೊಮ್ಮಾಯಿಯವರ ಸರಕಾರ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಮತಬ್ಯಾಂಕಿಗೆ ಏಟು ಬಿದ್ದಿದೆ ಎಂದು ತಿಳಿಸಿದರು.
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮೇಯರ್ ಮತ್ತು ಜಿಲ್ಲಾ ವಕ್ತಾರ ಎಸ್. ಹರೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.