ಮೀಸಲಾತಿ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್

ಬೆಂಗಳೂರು, ಮೇ.೧೮-ಪರಿಶಿಷ್ಟ ಜಾತಿಗಳ ವರ್ಗೀಕರಣ ಮತ್ತು ಒಳ ಮೀಸಲಾತಿ ಶಿಫಾರಸ್ಸು ಆದೇಶ ಪ್ರಶ್ನಿಸಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಅಸಂವಿಧಾನಿಕ ಮತ್ತು ಅವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಮಾಡಿರುವ ಬಿಜೆಪಿ ಸರ್ಕಾರದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಲು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯಾಕ್ಷ ರವಿ ಮಾಕಳಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ.
ಆಲಿಸಿದ ನ್ಯಾಯಮೂರ್ತಿ ಅನಂತರಾಮನಾಥ ಹೆಗಡೆ ಅವರಿದ್ದ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ನೋಟೀಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಮೇ.೨೪ಕ್ಕೆ ಮುಂದೂಡಿತು.
ಒಕ್ಕೂಟದ ಪರವಾಗಿ ನ್ಯಾಯವಾದಿ ಎಚ್. ವಿ.ಮಂಜುನಾಥ ವಾದಿಸಿದರು. ಅರ್ಜಿದಾರ ಪರ ವಕೀಲರಾದ ಅನಂತನಾಯ್ಕ, ನಬೀಲ್ ರವರು ಹಾಜರಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ವಕೀಲ ಅನಂತನಾಯ್ಕ, ಕಾನೂನು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯ ಸಚಿವ ಸಂಪುಟದ ಉಪಸಮಿತಿ ಯಾವುದೇ ಅಧ್ಯಯನ ನಡೆಸದೆ ಆತುರಾತುರ ವಾಗಿ ನೀಡಿದ ವರದಿಯನ್ನು ಆಧರಿಸಿ ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸಿ ಒಳ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿತು.
ಈ ಆದೇಶ ಮಾಡಿರುವುದನ್ನು ವಿರೋಧಿಸಿ ಬಂಜಾರ, ಭೋವಿ, ಕೊರಮ, ಕೊರಚ ಅಲೆಮಾರಿ ಸಮುದಾಯಗಳು ಪ್ರತಿಭಟಿಸಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿವೆ. ಅಲ್ಲದೆ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.