ಮೀಸಲಾತಿ ಸದ್ಬಳಕೆ: ಬಿಎಸ್‌ಪಿ ಅಭ್ಯರ್ಥಿಯನ್ನು ಗೆಲ್ಲಿಸಿ

ಸಂಜೆವಾಣಿ ವಾರ್ತೆ
ಮಾನ್ವಿ.ಮೇ.೦೨- ಸಂವಿಧಾನದ ಮೂಲ ಆಶಯವನ್ನು ಮರೆತಿರುವ ಜನರು ಹಣ, ಅಧಿಕಾರ, ಕುಟುಂಬ ರಾಜಕಾರಣಕ್ಕೆ ಮಣೆಯಾಕಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಲುವನ್ನು ಮರೆತು ಮೀಸಲಾತಿಯನ್ನು ಶ್ರೀಮಂತರ ಪಾಲಾಗುವಂತೆ ಮಾಡುತ್ತಿದ್ದಾರೆ ಅದಕ್ಕಾಗಿ ಈ ಬಾರಿಯಾದರೂ ರಾಜಾ ವಂಶದ ಕುಡಿಗೆ ಹಾಗೂ ಮಾಜಿ ಐಎಎಸ್ ಅಧಿಕಾರಿಗೆ ಸೋಲಿಸಿ ಮೀಸಲಾತಿ ದುರ್ಬಳಕೆಯಾಗದಂತೆ ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಿ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್ ನರಸಣ್ಣ ನಾಯಕ ಇವರನ್ನು ಗೆಲ್ಲಿಸುವಂತೆ ರಾಜ್ಯ ಕಾರ್ಯದರ್ಶಿ ವೈ ನರಸಪ್ಪ ಇವರು ಮನವಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ನೂರಕ್ಕೆ ತೊಂಬತ್ತರಷ್ಟು ಮಂದಿ ಎಸ್ಸಿ/ಎಸ್‌ಟಿ/ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರೇ ಆಗಿದ್ದಾರೆ ಕಾಂಗ್ರೆಸ್, ಬಿಜೆಪಿ, ಜನತಾ ದಳ ಮುಂತಾದ ಯಾವುದೇ ಪಕ್ಷದ ಆಳ್ವಿಕೆಯಲ್ಲೂ ಈ ಬಹುಜನ ಸಮಾಜವು ಬಡತನ, ನಿರುದ್ಯೋಗ, ಅವಮಾನ, ದೌರ್ಜನ್ಯ, ಹಸಿವು, ಅನಕ್ಷರತೆಗಳಿಂದ ಮುಕ್ತಿ ಪಡೆದೇ ಇಲ್ಲ! ಕಾಂಗ್ರೆಸ್ ಸರ್ಕಾರವು ಆರಂಭಿಸಿದ ಬಹುಜನ-ವಿರೋಧಿ ನೀತಿಗಳನ್ನು ಬಿಜೆಪಿ ಸರ್ಕಾರವು ಮತ್ತಷ್ಟು ತೀವ್ರಗೊಳಿಸಿ ಮುಂದುವರಿಸಿ ದೇಶವನ್ನು ದಿವಾಳಿಯ ಹಂತಕ್ಕೆ ಕೊಂಡೊಯ್ದಿದೆ. ಇದು ಹೀಗೇಕೆ ಆಗಿದೆ ಎಂದು ಪ್ರಶ್ನೆ ಮಾಡಿದರು.
೧೯೩೦ ರಿಂದಲೂ, ಮೇಲಾತಿ ಒಡೆತನದ ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ತಮ್ಮ ಪಕ್ಷಗಳಿಗೆ ನಿಧಿ ಒದಗಿಸುವ ದಂಧೆಯನ್ನು ನಡೆಸುತ್ತಲೇ ಇವೆ. ಹಿಂದಿನಿಂದಲೂ ಆ ದಂಧೆಯ ಹೆಚ್ಚಿನ ಲಾಭವನ್ನು ಕಾಂಗ್ರೆಸ್ ಪಕ್ಷವು ಮಾತ್ರ ಪಡೆಯುತ್ತಿತ್ತು. ಇದೀಗ ಬಿಜೆಪಿಯು ಅದರ ದೊಡ್ಡ ಲಾಭವನ್ನು ಪಡೆಯುತ್ತಿದೆ. ಬಿಜೆಪಿಗಳು ಆ ದಂಧೆಯನ್ನು ಕಾನೂನಿನ ಹಿಡಿತದಿಂದ ಸಡಿಲಿಸಿ, ಬೇಕಾಬಿಟ್ಟಿಯಾಗಿ ದುಡ್ಡು ಮಾಡಲು ತೊಡಗಿದ್ದರ ಪರಿಣಾಮವಾಗಿ, ಅದು ಎಲ್ಲರ ಕಣ್ಣಿಗೆ ಬಹಿರಂಗವಾಗಿ ಬೀಳುವಂತಾಗಿದೆ! ಹೆಚ್ಚು ಹೆಚ್ಚು ಬಾಂಡ್ ಗಳನ್ನು ಖರೀದಿಸಿದ ಕಂಪನಿಗಳಿಗೆ ಹೆಚ್ಚು ಹೆಚ್ಚು ಸರ್ಕಾರಿ ಗುತ್ತಿಗೆಗಳನ್ನು ನೀಡಲಾಗಿದೆ.
ಗುಲಾಮಗಿರಿಯು ಕೊನೆಯಾಗಬೇಕಾದರೆ, ಬಹುಜನ ಸಮಾಜದ ನೇತೃತ್ವವುಳ್ಳ ಪಕ್ಷವು ಸರ್ಕಾರ ರಚಿಸಬೇಕಿದೆ. ಈ ದೇಶದಲ್ಲಿ, ಅಕ್ಕಾ ಮಾಯಾವತಿಯವರ ನೇತೃತ್ವದಲ್ಲಿರುವ ಬಹುಜನ ಸಮಾಜ ಪಾರ್ಟಿಯು ಮಾತ್ರ ಬಹುಜನ ಸಮಾಜದ ಹಿತಕ್ಕಾಗಿ ಇರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ. ಅಕ್ಕಾ ಮಾಯಾವತಿಯವರ ನೇತೃತ್ವದಲ್ಲಿ ರಚನೆಯಾಗುವ ಸರ್ಕಾರವು ಮಾತ್ರ ಸಂವಿಧಾನಕ್ಕೆ ಅನುಗುಣವಾದ ನೀತಿ-ನಿಯಮಗಳನ್ನು ಜಾರಿ ಮಾಡಿ, ಎಲ್ಲ ಭಾರತೀಯರ ಏಳಿಗೆಯನ್ನು ಸಾಧ್ಯವಾಗಿಸುವ ಸಾಮಾಜಿಕ-ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಈ ವೈ ನರಸಪ್ಪ ರಾಜ್ಯ ಕಾರ್ಯದರ್ಶಿ, ಹನುಮಂತಪ್ಪ ವಕೀಲರು ಲೋಕಸಭಾ ಉಸ್ತುವಾರಿ, ವೆಂಕನಗೌಡ ನಾಯಕ ಜಿಲ್ಲಾಧ್ಯಕ್ಷ, ಶ್ಯಾಮ್ ಸುಂದರ್ ಕುಂಬುದಾಳ, ವಿರುಪನಗೌಡ ಜಟ್ಟಿ, ಬಿ ಚಂದ್ರಶೇಖರ ಸೇರಿದಂತೆ ಅನೇಕರು ಇದ್ದರು.