ಮೀಸಲಾತಿ ಸಂವಿಧಾನಬದ್ಧ ಅವಕಾಶ

ಅರಸೀಕೆರೆ,ಆ. ೨೯- ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿಯೂ ಶೋಷಿತ ಸಮುದಾಯಗಳಿಗೆ ಬಲ ತುಂಬಿದಾಗ ಮಾತ್ರ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯ ಎಂಬ ಸದುದ್ದೇಶದಿಂದಲೇ ಮೀಸಲಾತಿ ಹೆಸರಲ್ಲಿ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿ ಕೊಟ್ಟಿರುವುದರಿಂದ ಭಾರತದ ಸಂವಿಧಾನವನ್ನು ವಿಶ್ವ ಸಮುದಾಯವೇ ಒಪ್ಪಿದೆ ಎಂದು ನಗರಸಭೆ ಸದಸ್ಯ ಗಿರೀಶ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ ೩೦ರಂದು ಚುನಾವಣೆ ನಿಗದಿಯಾಗಿದೆ. ಪರಿಶಿಷ್ಟ ಪಂಗಡದ ಜನರ ದಶಕಗಳ ಅಪೇಕ್ಷೆಯಂತೆ ಮೊದಲ ಬಾರಿಗೆ ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಬಂದಿರುವುದರಿಂದ ಕೇವಲ ವಾಲ್ಮೀಕಿ ಸಮಾಜ ಮಾತ್ರವಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದ ಸಮುದಾಯಗಳು ಸ್ವಾಗತಿಸಿವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸದಸ್ಯರ ಬಹುಮತ ಎಷ್ಟು ಮುಖ್ಯವೋ ಅಷ್ಟೇ ಸಂವಿಧಾನದತ್ತ ಮೀಸಲಾತಿ ಕೂಡ ಮುಖ್ಯ ಎಂಬುದನ್ನು ಪಕ್ಷಬೇದ ಮರೆತು ಜನಪ್ರತಿನಿಧಿಗಳಾದ ನಾವು ಒಪ್ಪಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಸಂವಿಧಾನವನ್ನು ಗೌರವಿಸುವು ಎಂದು ಜೆಡಿಎಸ್ ಸದಸ್ಯರ ಹೆಸರನ್ನು ಪ್ರಸ್ತಾಪಿಸದೆ ಮನವಿ ಮಾಡಿದರು.
ಪರಿಶಿಷ್ಟ ವರ್ಗದಿಂದ ಆಯ್ಕೆಯಾಗಿರುವ ನಾನು ನಗರಸಭೆ ಅಧ್ಯಕ್ಷರಾಗಿ ನಿಯೋಜನೆಗೊಂಡರೆ ಪಕ್ಷ ಬೇಧ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆ ಆಡಳಿತವನ್ನು ಚುರುಕುಗೊಳಿಸುವ ಜತೆಗೆ ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಕೊಡಿಸುವ ಹಂಬಲವಿದೆ. ಇದಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮತ್ತು ನಮ್ಮ ಪಕ್ಷದ ಎಲ್ಲಾ ಮುಖಂಡರು ನಗರ ಸಭೆಯ ಸದಸ್ಯರು ಸಹ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.