ಮೀಸಲಾತಿ ವಿಸ್ತರಿಸದಿದ್ದರೆ ಧರಣಿ

ಹುಬ್ಬಳ್ಳಿ,ನ4: ರಾಜ್ಯದ ಎಲ್ಲ ಕುರುಬರ ಸಮುದಾಯವನ್ನು ಎಸ್. ಟಿ ಮೀಸಲಾತಿಗೆ ಸೇರ್ಪಡೆ ಮಾಡದೇ ಅನ್ಯಾಯ ಮಾಡಿದ್ದು, ನವೆಂಬರ್ 11 ರಂದು ಕನಕದಾಸರ ಜಯಂತಿಯಂದು ಎಸ್.ಟಿ ಮೀಸಲಾತಿ ವಿಸ್ತರಣೆ ಮಾಡದೇ ಹೋದಲ್ಲಿ ನವೆಂಬರ್ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಎಸ್.ಟಿ. ಮೀಸಲಾತಿ ಹಕ್ಕಿಗಾಗಿ ಧರಣಿ ಮಾಡಲಾಗುವುದು ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಕುರುಬರಿಗೂ ಎಸ್.ಟಿ ಮೀಸಲಾತಿ ವಿಸ್ತಾರವಾಗದೇ ಅನ್ಯಾಯವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ ಪ್ರಮಾಣ 50% ಮೀರದಂತೆ ಯಾವುದೇ ಕಾನೂನು ತೊಡಕಿಲ್ಲದಂತೆ ಹಿಂದುಳಿದ ವರ್ಗಗಳ 2ಎ ಮೀಸಲಾತಿಯಲ್ಲಿನ ಶೇಕಡಾ 8% ರಷ್ಟನ್ನು ಎಸ್. ಟಿ ಮೀಸಲಾತಿ ಪಟ್ಟಿಯೊಳಗೆ ಸೇರಿಸಿ, ಸಂವಿಧಾನಬದ್ಧವಾಗಿ ನಡೆದಿರುವ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ವಿಳಂಬ ಮಾಡದೇ ಅಂಗೀಕರಿಸಬೇಕು ಎಂದ ಅವರು, ಎಸ್.ಟಿ ಮೀಸಲಾತಿಯನ್ನು ರಾಜ್ಯದ 31 ಜಿಲ್ಲೆಗಳಿಗೂ ವಿಸ್ತಾರ ಮಾಡಿ ಮೂಲ ಬುಡಕಟ್ಟು ಜನಾಂಗವಾದ ಕುರುಬರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಸ್.ಟಿ ಮೀಸಲಾತಿಯನ್ನು ವಿಸ್ತರಣೆ ಮಾಡಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಸಂ. ಕಾರ್ಯದರ್ಶಿ ಪ್ರೇಮಾ ನಾಯ್ಕರ್, ಮಂಜುನಾಥ ಗುಡ್ಡಣ್ಣವರ, ಅರುಣಕುಮಾರ್, ಮಹಾಂತೇಶ ಕಟ್ಟಿಕರ, ಚಂದ್ರು ಮುಶಪ್ಪನವರ ಉಪಸ್ಥಿತರಿದ್ದರು