ಹಲವರ ಬಂಧನ
ಬೆಂಗಳೂರು,ಮಾ.೨೪-ಮೀಸಲಾತಿ ಹೆಚ್ಚಳವನ್ನು ಸಂವಿಧಾನದ ೯ನೇ ಪರಿಚ್ಛೇದಕ್ಕೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಇಂದು ನಗರದಲ್ಲಿ ರಾಜಭವನ ಚಲೋ ನಡೆಸಿದರು.ಕೆಪಿಸಿಸಿ ಕಚೇರಿಯಿಂದ ರ್ಯಾಲಿ ಆರಂಭಿಸಿ ರಾಜಭವನ ಮುತ್ತಿಗೆಗೆ ಯತ್ನಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕೈ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹಮ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಕೈ ನಾಯಕರು ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ ಶೆಡ್ಯೂಲ್ ೯ಕ್ಕೆ ಸೇರ್ಪಡೆಗೊಳಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ವಿಳಂಬವಾಗಿ ಶಿಫಾರಸು ಮಾಡಿರುವ ವಿರುದ್ಧ ಆಕ್ರೋಶ ಹೊರಹಾಕಿದರು. ಬಿಜೆಪಿ ಸರ್ಕಾರ ದಲಿತ ವಿರೋಧಿ ಸರ್ಕಾರ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಿಫಾರಸು ವಿಳಂಬ ಏಕೆ?:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೀಸಲಾತಿ ಹೆಚ್ಚಳ ಸಂಬಂಧ ೯ನೇ ಪರಿಚ್ಛೇದಕ್ಕೆ ಸೇರಿಸಲು ಇಷ್ಟು ದಿನ ವಿಳಂಬ ಮಾಡಿದ್ದೇಕೆ ಮೀಸಲಾತಿ ಹೆಚ್ಚಳಕ್ಕೆ ಆದೇಶ ಯಾವಾಗ ಆಯಿತು ಎಂದು ಪ್ರಶ್ನಿಸಿದರು.ಆದೇಶ ಆಗಿ ಬಹಳ ದಿನಗಳು ಕಳೆದವು, ನಂತರದಲ್ಲಿ ಸಚಿವ ಸಂಪುಟದಲ್ಲೂ ನಿರ್ಧಾರ ಆಯಿತು. ನಾವು ಪ್ರತಿಭಟನೆಗೆ ಕರೆ ಕೊಟ್ಟ ಬಳಿಕ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ೫೦% ಇರುವ ಮೀಸಲಾತಿ ಏರಿಕೆ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸರ್ಕಾರ ಉತ್ತರ ಕೊಟ್ಟಿದೆ. ಅಂದರೆ ಏನರ್ಥ? ರಾಜ್ಯ ಸರ್ಕಾರದ ಮೀಸಲಾತಿ ಹೆಚ್ಚಳ ಮಾಡಿದರೂ ಕೇಂದ್ರ ಒಪ್ಪಲ್ಲ ಎಂದಲ್ಲವೇ ಎಂದು ವಾಗ್ದಾಳಿ ನಡೆಸಿದರು.ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ೫೦% ಮೀರಬಾರದು ಎಂದಿದೆ. ಅದು ಮೀರಬೇಕಾದರೆ ಸಂವಿಧಾನದ ೯ ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು. ಕೇವಲ ಮತಕ್ಕಾಗಿ ಹಾಗೂ ಜನರ ದಾರಿತಪ್ಪಿಸಲು ಮೋಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ದಲಿತರಿಗೆ ಮೋಸ:
ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ , ದಲಿತರಿಗೆ ಎಷ್ಟು ಮೋಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರ ೧೫ ದಿನ ಮಾತ್ರ ಇದೆ. ಅಷ್ಟು ದಿನ ಕೂಡಾ ಇರಬಾರದು. ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿ, ರಾಜ ಭವನ ಚಲೋ ಹಮ್ಮಿಕೊಂಡಿದ್ದೇವೆ. ಬಿಜೆಪಿ ಸರ್ಕಾರ ದಲಿತರಿಗೆ ಅವಮಾನ ಮಾಡಿದೆ ಎಂದು ಕಿಡಿಕಾರಿದರು.

ಚುನಾವಣೆ ಗಿಮಿಕ್:
ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮಾತನಾಡಿ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬಿಜೆಪಿಯವರು ಮೋಸ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ನಾವು ಪ್ರತಿಭಟನೆ ನಡೆಸುತ್ತೇವೆಂಬ ಕಾರಣಕ್ಕೆ ಶಿಫಾರಸು ಮಾಡಿದ್ದಾರೆ. ಶೇ.೫೦ಕ್ಕಿಂತಲೂ ಮೀಸಲಾತಿ ಪ್ರಮಾಣ ಹೆಚ್ಚುವಂತಿಲ್ಲ. ಈಗ ರಾಜ್ಯದಲ್ಲಿ ಒಟ್ಟು ೫೬% ಹೆಚ್ಚಿಸಿದರೆ ಮೀಸಲಾತಿ ಸಾಧ್ಯವಿದೆಯಾ?. ಒಂಬತ್ತನೇ ಶೆಡ್ಯೂಲ್ ಗೆ ಯಾಕೆ ಸೇರಿಸುತ್ತಿಲ್ಲ. ಇದೆಲ್ಲಾ ಕೇವಲ ಸಮುದಾಯದ ಮತಗಳನ್ನ ಸೆಳೆಯುವ ತಂತ್ರವಷ್ಟೇ ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ, ಡಿಕೆಶಿ ವಶಕ್ಕೆ: ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋ ಮೂಲಕ ರಾಜಭವನ ಮುತ್ತಿಗೆ ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದ ಬಳಿಯೇ ತಡೆದು ನಿಲ್ಲಿಸಲಾಯಿತು. ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕೈ ನಾಯಕರು ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದ ಬಳಿಯೇ ರಸ್ತೆಯಲ್ಲೇ ಕೂತು ಧರಣಿ ನಡೆಸಿದರು. ಪೊಲೀಸರು ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು.
ಟ್ರಾಫಿಕ್ ಜಾಮ್:
ಕಾಂಗ್ರೆಸ್ ರಾಜಭವನ ಚಲೋ ಹಿನ್ನೆಲೆಯಲ್ಲಿ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಕ್ವೀನ್ಸ್ ರಸ್ತೆಯಲ್ಲಿ ಸವಾರರು ಪರದಾಡಿದರು.ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿ ಭದ್ರತೆ ಕೈಗೊಳ್ಳಲಾಗಿತ್ತು.