ಮೀಸಲಾತಿ ರದ್ಧತಿಗೆ ಆಗ್ರಹಿಸಿ ಏ.೧೦ ಪ್ರತಿಭಟನೆ

ದಾವಣಗೆರೆ.ಏ.೭; ಒಳಮೀಸಲಾತಿ ರದ್ದು ಮಾಡಬೇಕೆಂದು ಒತ್ತಾಯಿಸಿ ಏ.೧೦ ರಂದು ನಗರದ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತ ಹಾಗೂ ಗಾಂಧಿ ವೃತ್ತದ ಮಾರ್ಗವಾಗಿ ಎಸಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಿನ್ನಸಮುದ್ರ ಶೇಖರ್ ನಾಯ್ಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸಚಿವ ಸಂಪಟದ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಭಾರತದ ಸಂವಿಧಾನ ಮತ್ತು ಕಾನೂನನ್ನು ಗಾಳಿ ತೂರಲಾಗಿದೆ. ಈ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪ್ರಕ್ರಿಯೆಯನ್ನು ದಾವಣಗೆರೆ ಜಿಲ್ಲಾ ಮೀಸಲಾತಿ ಸಂರಕ್ಷಣಾ ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ ಎಂದರು. “ನ್ಯಾ.ಸದಾಶಿವ ಆಯೋಗದ ವರದಿಯನ್ನು ಒಪ್ಪಿರುವುದಿಲ್ಲ” ಎನ್ನುತ್ತಲೇ ವರದಿಯನ್ನು ಆಧಾರಿಸಿ ಪರಿಶಿಷ್ಟ ಜಾತಿಗಳನ್ನು ೪ ಗುಂಪುಗಳಾಗಿ ವಿಭಜಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿರುವುದು ನ್ಯಾಯ ಸಮ್ಮತವಾಗಿಲ್ಲ. ನಾಡಿನ ಬಂಜಾರ, ಭೋವಿ, ಕೊರಮ, ಕೊರಚ, ಮತ್ತಿತರ ಸಮುದಾಯಗಳು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತವೆ ಎಂದರು.ಈ ಕೂಡಲೇ ಪರಿಶಿಷ್ಟ ಜಾತಿಗಳನ್ನು ೪ ಗುಂಪುಗಳನ್ನಾಗಿ ವರ್ಗೀಕರಿಸಿ ಒಳಮೀಸಲಾತಿ ಹಂಚಿಕೆ ಮಾಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವುದನ್ನು ತಡೆಹಿಡಿಯಬೇಕು. ಒಳ ಮೀಸಲಾತಿಯೇ ಅಸಂವಿಧಾನಿಕ ಆಗಿರುವಾಗ ಗುಂಪು-೩ ಹೆಸರಿನಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ ೪.೫ ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಕೂಡ ಅವೈಜ್ಞಾನಿಕ. ಇದು ಭಾರತದ ಸಂವಿಧಾನ ಮತ್ತು ನಮ್ಮ ಸಮುದಾಯಗಳಿಗೆ ಮಾಡಿದ ಮಹಾದ್ರೋಹ, ಶೇಕಡಾ ೪.೫ ಮೀಸಲಾತಿ ಹಂಚಿಕೆಯನ್ನು ನಮ್ಮ ಸಮುದಾಯಗಳು ಒಪ್ಪುವುದಿಲ್ಲ ಎಂದರು.ಬಿಜೆಪಿ ಸರ್ಕಾರದ ಈ ನೀತಿ ವಿರೋಧಿಸಿ ತಾಂಡ,ಹಟ್ಟಿಗಳಲ್ಲಿ ಮತ ಕೇಳಲು ಬರುವ ರಾಜಕೀಯ ನಾಯಕರ ಪ್ರವೇಶ ನಿಷೇಧಿಸಲಾಗುವುದು ಎಂದರು.