ಮೀಸಲಾತಿ ರದ್ದು: ಹೈಕೋರ್ಟ್ ನಲ್ಲಿ ದಾವೆ

ರಾಯಚೂರು,ಮಾ.೨೯- ಹಿಂದುಳಿದ ಆಯೋಗದ ಶಿಫಾರಸ್ಸು ಮೇರೆಗೆ ರಾಜ್ಯದ ಮುಸ್ಲಿಂ ಜನಾಂಗಕ್ಕೆ ಶೇ.೪ ಮೀಸಲಾತಿ , ೨ಬಿ ಅಡಿಯಲ್ಲಿ ಕಲ್ಪಿಸಲಾಗಿದೆ.ಈ ಮೀಸಲಾತಿಯನ್ನು ರಾಜ್ಯ ಸರಕಾರ ಯಾವುದೇ ಆಯೋಗದ ಶಿಫಾರಸ್ಸು ಪಡೆಯದೇ ಏಕಾಏಕಿ ೨ಬಿ ಶೇ ೪ ರ ಮೀಸಲಾತಿಯನ್ನು ರದ್ದುಪಡಿಸಿರುವುದು ಸಂವಿಧಾನ ವಿರೋಧಿ ಧೋರಣೆಯಾಗಿದೆ ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಶೈಕ್ಷಣಿಕ,ರಾಜಕೀಯ,ಸಾಮಾಜಿಕವಾಗಿ ಹಿಂದುಳಿದಿರುವ ಆಧಾರದ ಮೇಲೆ
ಮುಸ್ಲಿಂ ಜನಾಂಗಕ್ಕೆ ಶೇ.೪ ಮೀಸಲಾತಿ , ೨ಬಿ ಅಡಿಯಲ್ಲಿ ಕಲ್ಪಿಸಲಾಗಿದೆ.ಆದರೆ ರಾಜ್ಯ ಸರ್ಕಾರ ಯಾವುದೇ ಆಯೋಗದ ಶಿಫಾರಸ್ಸು ಪಡೆಯದೇ ಮೀಸಲಾತಿಯನ್ನು ರದ್ದುಪಡಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅತ್ಯಂತ ಬಲಿಷ್ಠ ಹಾಗೂ ಎಲ್ಲಾ ರಂಗದಲ್ಲಿಯೂ ಶೈಕ್ಷಣಿಕ,ರಾಜಕೀಯ,ಸಾಮಾಜಿಕ,ಆರ್ಥಿಕವಾಗಿ ಮುಂದುವರೆದ ವೀರಶೈವ ಲಿಂಗಾಯತರಿಗೆ ಶೇ ೨ ಹಾಗೂ ಒಕ್ಕಲಿಗರಿಗೆ ಶೇ.೨ ಈಗಿರುವ ೩ಬಿ ಶೇ ೫ ರಿಂದ ೭ ರವರೆಗೆ ೩ಎ ಶೇ ೪ ರಿಂದ ೬ ವರೆಗೆ ಹೆಚ್ಚಿಸಿದ್ದು,ಸಂವಿಧಾನ ವಿರೋಧಿಯಾಗಿದೆ ಎಂದರು.
ದೇಶದ ಸಂವಿಧಾನದಲ್ಲಿ ಶೋಷಿತ ಸಮಾಜಗಳಿಗೆ ಸಾಮಾಜಿಕ,ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ ಮೇಲಕ್ಕೆ ಎತ್ತಿ ಸಮಾನ ಸಮಾಜ ನಿರ್ಮಿಸುವುದು ಸಂವಿದಾನದ ಗುರಿಯಾಗಿದೆ.ಯಾವುದೇ ಮೀಸಲಾತಿ ನೀಡಬೇಕಾದರೆ ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ರಾಜಕೀಯವಾಗಿ ಹಿಂದುಳಿದಿರುವ ಬಗ್ಗೆ ನಿಖರವಾದ ಮಾಹಿತಿ ಬೇಕಾಗುತ್ತದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಜಾತಿವಾರು ಜನಗಣತಿ ಮಾಡಲು ಶ್ರೀಕಾಂತರಾಜ ಇವರ ನೇತೃತ್ವದಲ್ಲಿ ಜಾತಿವಾರು ಜನಗಣತಿ ಮಾಡಲು ಆಯೋಗ ರಚಿಸಿ ಸುಮಾರು ರೂ.೫೦೦ ಕೋಟಿ ವೆಚ್ಚ ಮಾಡಿದರೆ ಇವತ್ತಿ ನವರೆಗೂ ವರದಿಯನ್ನು ಸರ್ಕಾರ ಸ್ವೀಕರಿಸದೇ ಹಿಂದುಳಿದ ಜಾತಿಗಳಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ರಂಗದಲ್ಲಿಯೂ ಅತ್ಯಂತ ಮುಂದುವರೆದ ಬಲಿಷ್ಠ ವೀರಶೈವ ಲಿಂಗಾಯತ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಖಂಡಿಸಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದರು.
ಈ ಸಂದರ್ಭದಲ್ಲಿ ದೊಡ್ಡ ಖಾಜನಗೌಡ,ಕೆ.ಕರಿಯಪ್ಪ,ಕೆ.ಹನುಮಂತಪ್ಪ,ಜಿ.ಸುರೇಶ್,ವಿ.ಲಕ್ಷ್ಮೀರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.