ಬೀದರ್,ಮಾ.26-ಕರ್ನಾಟಕದಲ್ಲಿ ಮತೀಯ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಸರ್ಕಾರ ನೀಡಿದ 4 ಪ್ರತಿಶತ ಮೀಸಲಾತಿಯನ್ನು ರದ್ದುಗೊಳಿಸಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರದ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮರ್ಥಿಸಿಕೊಂಡರು.
ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ 2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಹುತಾತ್ಮ ಸ್ಮಾರಕ ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ನೀಡಿದ 4 ಪ್ರತಿಶತ ಮೀಸಲಾತಿಯನ್ನು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ತಲಾ 2 ಪ್ರತಿಶತದಂತೆ ಹಂಚಿಕೆ ಮಾಡುವ ಮೂಲಕ ಕಾಂಗ್ರೆಸ್‍ನ ತುಷ್ಠೀಕರಣ ರಾಜಕಾರಣವನ್ನು ಮೊಟಕುಗೊಳಿಸಲಾಗಿದೆ. ಹಾಗೇ ಪರಿಶಿಷ್ಟರ ಒಳ ಮೀಸಲಾತಿಯನ್ನು ಸಹ ಹೆಚ್ಚಳ ಮಾಡಲಾಗಿದ್ದು, ಈ ನೆಲದಲ್ಲಿ ಬದುಕುವ ಪ್ರತಿಯೊಬ್ಬರಿಗೆ ಅವರ ಹಕ್ಕು ಕಲ್ಪಿಸಲಾಗಿದೆ ಎಂದರು.
“ಗೋರ್ಟಾ (ಬಿ) ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ 50 ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರೀಯ ಭವ್ಯ ಸ್ಮಾರಕ ನಿರ್ಮಿಸಲಾಗುವುದು. ಅಲ್ಲಿ ಧ್ವನಿ ಬೆಳಕು ವ್ಯವಸ್ಥೆ ಮಾಡುವ ಮೂಲಕ ಗೋರ್ಟಾ (ಬಿ) ಗ್ರಾಮದ ಚರಿತ್ರೆಯನ್ನು ಭಾರತೀಯರು ಹಾಗೂ ವಿದೇಶಿಯರಿಗೆ ಪರಿಚಯಿಸುವ ಕಾರ್ಯ ಮಾಡುವುದರ ಜೊತೆಗೆ ಇದೊಂದು ರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾಡಲಾಗುವುದು” ಎಂದರು.
ತೆಲಂಗಾಣದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 17ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲಾಗುವುದು. ತಾನು ಒಂದು ವರೆ ವರ್ಷದ ಬಳಿಕ ಇಲ್ಲಿಗೆ ಆಗಮಿಸಿ ಈ ರಾಷ್ಟ್ರೀಯ ಭವ್ಯ ಸ್ಮಾರಕ ಉದ್ಘಾಟಿಸುವುದಾಗಿ ತಿಳಿಸಿದರು
ಇದೇ ವೇಳೆ ಅವರು ಸರ್ದಾರ ವಲ್ಲಭಭಾಯಿ ಪಟೇಲ್ ಅವರ 35 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಿದರಲ್ಲದೆ, 103 ಅಡಿ ಎತ್ತರದ ರಾಷ್ಟ್ರಧ್ವಜ ಸ್ಥಂಭದಲ್ಲಿ 20*30 ಚದುರಡಿ ಅಳತೆಯ ರಾಷ್ಟ್ರಧ್ವಜವನ್ನು ನೆರವೇರಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಗೋರ್ಟಾ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 6 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಭೂಮಿ ಮೇಲೆ ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಹಾಗಾಗಿ ತಾವೆಲ್ಲರು ನಮಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ,, ಸರ್ದಾರ ವಲ್ಲಭಭಾಯಿ ಪಟೇಲ ಅವರು ಅಂದು ಹೈದ್ರಾಬಾದ್ ಕರ್ನಾಟಕಕ್ಕೆ ಮುಕ್ತಿ ತಂದು ಕೊಟ್ಟಂತೆ ಆಧುನಿಕ ಚಾಣಾಕ್ಯ ಅಮಿತ್ ಷಾ ಅವರು 370 ರದ್ದು ಮಾಡಿ ಕಾಶ್ಮೀರವನ್ನು ಮುಕ್ತಗೊಳಿಸಿದರು. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೈದ್ರಾಬಾದ್ ಕರ್ನಾಟಕ ಪದವನ್ನು ತೆಗೆದು ಹಾಕಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವರಾದ ಪ್ರಭು ಚವ್ಹಾಣ್, ಕಲಬುರಗಿ ಸಂಸದ ಡಾ.ಉಮೇಶ ಜಾಧವ್, ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ, ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ಸ್ಥಳೀಯ ಶಾಸಕ ಶರಣು ಸಲಗರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿ, ರಘುನಾಥ ಮಲ್ಕಾಪುರೆ, ಮಹೇಶ್ ತೆಂಗಿನಕಾಯಿ, ಕೇಶವಕಾರ್ಯ ಸಂವರ್ಧನ ಸಮಿತಿ ಪ್ರಮುಖರಾದ ಮಾರುತಿ ಪಂಚಭಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆರಂಭದಲ್ಲಿ ವಿಧಾನ ಪರಿಷತ ಸದಸ್ಯರಾದ ತುಳಸಿ ಮುನಿರಾಜುಗೌಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.