ಮೀಸಲಾತಿ ಬೇಡಿಕೆ ಸಿಎಂ ಜಾಣ ನಡೆ

ಬೆಂಗಳೂರು, ಸೆ. ೨೦- ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಿತಿಗಳನ್ನು ರಚಿಸಿ ವರದಿಗಳನ್ನು ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಅವಸರದಿಂದ ಯಾವುದೇ ತೀರ್ಮಾನಗಳನ್ನು ಮಾಡುವಂತಿಲ್ಲ. ಕಾನೂನು ಚೌಕಟ್ಟಿನಲ್ಲೇ ಎಲ್ಲವನ್ನು ಮಾಡಬೇಕಾಗುತ್ತದೆ. ಸದನದ ಎಲ್ಲರ ಅಭಿಪ್ರಾಯ ಪಡೆದು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.ಶೂನ್ಯ ವೇಳೆಯಲ್ಲಿ ಬಿಜೆಪಿಯ ಬಸನಗೌಡಪಾಟೀಲ್ ಯತ್ನಾಳ್ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ೨ ಬಿಯಿಂದ ೨ಎಗೆ ಸೇರಿಸುವ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಬಯಸಿದಾಗ ಉತ್ತರ ನೀಡಿದ ಮುಖ್ಯಮಂತ್ರಿಗಳು, ಕಳೆದ ಅಧಿವೇಶನದಲ್ಲೂ ವೀರಶೈವ ಲಿಂಗಾಯತ ಪಂಚಮಸಾಲಿ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಯೊಬ್ಬರಿಗೂ ಮೀಸಲಾತಿ ಸಿಗಬೇಕು. ಅವರು ಮೀಸಲಾತಿ ಕೇಳುವುದು ತಪ್ಪಲ್ಲ. ಆದರೆ ಮೀಸಲಾತಿಯನ್ನು ಕಾನೂನು ಚೌಕಟ್ಟಿನಲ್ಲೇ ನೀಡಬೇಕಾಗುತ್ತದೆ. ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್‌ನ ತೀರ್ಪುಗಳು ಇವೆ. ಯಾವುದೇ ಮೀಸಲಾತಿ ಶೇ. ೫೦ ಕ್ಕಿಂತ ಹೆಚ್ಚಾಗಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಕರ್ನಾಟಕದಲ್ಲಿ ಈಗಾಗಲೇ ಶೇ. ೫೦ ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ ಎಂದರು.ಹಿಂದುಳಿದ ವರ್ಗದವರೆಗೆ ಶೇ. ೩೩ ರಷ್ಟು ಮೀಸಲಾತಿ ಕೊಟ್ಟಿದ್ದೇವೆ. ಎಸ್ಸಿ,ಎಸ್ಟಿಗಳು ಮೀಸಲಾತಿಯನ್ನು ಶೇ. ೭.೫ ಕ್ಕೆ ಹೆಚ್ಚು ಮಾಡಬೇಕು ಎಂದು ಹೇಳಿದ್ದಾರೆ. ಬೇರೆ ಬೇರೆ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಹಿಂದುಳಿದ ವರ್ಗದಲ್ಲಿ ಇರದವರು ಹಿಂದುಳಿದ ವರ್ಗಗಳಿಗೆ ಬರಲು ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಇದು ಸೂಕ್ಷ್ಮ ವಿಚಾರ ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನು ನಿರ್ಧರಿಸಬೇಕಾಗಿದೆ. ಈಗಾಗಲೇ ಈ ಮೀಸಲಾತಿ ಸಂಬಂಧ ಎರಡು ಸಮಿತಿಗಳನ್ನು ಮಾಡಿದ್ದೇವೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆಗೆ ಸಂಬಂಧಿಸಿದಂತೆ ವರದಿ ನೀಡಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಸೂಚಿಸಿದ್ದೇನೆ. ಆಯೋಗದವರು ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದ್ದಾರೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಪ್ರವಾಸ ನಡೆಸಬೇಕಿದೆ. ಆ ವರದಿ ಬಂದ ನಂತರ ಎಲ್ಲರ ಜತೆ ಚರ್ಚಿಸಿ, ಸದನದ ಒಟ್ಟು ಅಭಿಪ್ಪಾಯ ಪಡೆದು ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ಮೀಸಲಾತಿ ವಿಚಾರ ಅತ್ಯಂತ ಸೂಕ್ಷ್ಮದ್ದು ವೈಜ್ಞಾನಿಕವಾಗಿ ಮಾಡಬೇಕಾಗುತ್ತದೆ. ಯಾವುದ ತೀರ್ಮಾನಗಳು ಕಾನೂನಿನ ಚೌಕಟ್ಟಿನಲ್ಲಿ ನಿಲ್ಲಬೇಕು ಆ ರೀತಿ ಆಗಬೇಕು. ಇಲ್ಲದಿದ್ದರೆ ತೀರ್ಮಾನಗಳು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲಯ ಅಂಕಿ ಅಂಶ ಆಧಾರದ ಮೇಲೆಯೇ ಮೀಸಲಾತಿಗಳನ್ನು ನೀಡಬೇಕು. ಯಾವುದೇ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಅಂಕಿ ಅಂಶಗಳೆ ಮಾನ ದಂಡ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ವರದಿ ಬಂದ ನಂತರ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿ ಸಂಬಂಧ ಸದನದಲ್ಲಿ ಚರ್ಚೆ ನಡೆಯುತ್ತದೆ. ಆ ಸಂದರ್ಭದಲ್ಲಿ ಆ ಬಗ್ಗೆ ಸಮರ್ಪಕವಾಗಿ ಮಾತನಾಡುತ್ತೇನೆ. ಯಾವುದೇ ಮೀಸಲಾತಿಗೆ ಕುಲಶಾಸ್ತ್ರ ಅಧ್ಯಯನಗಳು ಆಗಬೇಕು. ಲಿಂಗಾಯತ ಪಂಚಮಸಾಲಿ ವಿಚಾರದಲ್ಲೂ ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಹಾಗಾಗಿ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.ಹಿಂದಿನ ಸರ್ಕಾರ ಕೆಲ ಕ್ರಮ ಕೈಗೊಂಡಿದೆ. ಈಗ ನಾವು ತೀರ್ಮಾನಗಳನ್ನು ಮಾಡಬೇಕಿದೆ. ಇಲ್ಲಿ ಆ ಸರ್ಕಾರ, ಈ ಸರ್ಕಾರ ಎಂಬುದಿಲ್ಲ. ವೈಜ್ಞಾನಿಕವಾಗಿ ತೀರ್ಮಾನಗಳನ್ನು ಮಾಡಿದರೆ ಸಮಸ್ಯೆ ಆಗಲ್ಲ. ಹಾಗಾಗಿ ಅತ್ಯಂತ ಸೂಕ್ಷ್ಮವಾಗಿ ಅಂಕಿ ಅಂಶಗಳ ಆಧಾರದ ಮೇಲೆ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.ಸರ್ಕಾರ ಮೀಸಲಾತಿ ಬಗ್ಗೆ ತೀರ್ಮಾನಗಳನ್ನು ಅವಸರವಾಗಿ ಕೈಗೊಂಡರೆ ಅವು ಕಾನೂನಿನ ಮುಂದೆ ನಿಲ್ಲುವುದಿಲ್ಲ. ಇದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕಿದೆ. ವರದಿಗಳು ಬರಲಿ ನಿಮ್ಮೆಲ್ಲರ ಅಭಿಪ್ರಾಯ ಪಡೆದೇ ತೀರ್ಮಾನ ಮಾಡುತ್ತನೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಧರಣಿ
ಲಿಂಗಾಯತ ಪಂಚಮಸಾಲಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಉತ್ತರಿದಿಂದ ತೃಪ್ತರಾಗದ ಬಿಜೆಪಿಯ ಬಸನಗೌಡಪಾಟೀಲ್ ಯತ್ನಾಳ್ ಹಾಗೂ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಸರ್ಕಾರದಿಂದ ಸ್ಪಷ್ಟ ಉತ್ತರಬೇಕು. ಈ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಿರಿ. ಇದುವರೆಗೂ ಸರ್ವ ಪಕ್ಷಗಳ ಸಭೆ ಕರೆದಿಲ್ಲ. ಸರ್ಕಾರ ಏನು ಮಾಡುತ್ತಿದೆ ಎಂದು ಆಗ್ರಹಿಸಿ ಧರಣಿ ನಡೆಸಿದರು.
ಆಗ ಮುಖ್ಯಮಂತ್ರಿಗಳು ಎದ್ದು ನಿಂತು, ಈಗಾಗಲೇ ೨ ಬಾರಿ ಸರ್ವಪಕ್ಷಗಳ ಸಭೆ ಕರದಿದ್ದೇನೆ. ತೀರ್ಮಾನ ಮಾಡುತ್ತೇವೆ ಸಹಕರಿಸಿ ಎಂದರು.ಈ ಹಂತದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಮಧ್ಯ ಪ್ರವೇಶಿಸಿ, ಮುಖ್ಯಮಂತ್ರಿಗಳು ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾಗಿ ಎಲ್ಲವನ್ನು ಹೇಳಿದ್ದಾರೆ. ಧರಣಿ ಕೈಬಿಡಿ ತೀರ್ಮಾನ ಮಾಡುತ್ತಾರೆ ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಬಸನಗೌಡಪಾಟೀಲ್ ಯತ್ನಾಳ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಧರಣಿಯನ್ನು ವಾಪಸ್ ಪಡೆದು ತಮ್ಮ ಸ್ಥಾನಗಳಿಗೆ ಮರಳಿದರು.