ಮೀಸಲಾತಿ ಬೇಡಿಕೆ: ಎಲ್ಲಾ ಸಮುದಾಯಕ್ಕೆ ನ್ಯಾಯ ಒದಗಿಸಲು ಕ್ರಮ; ಸಿಎಂ

ಬೆಂಗಳೂರು, ಜು.19- ರಾಜ್ಯದಲ್ಲಿ ಮೀಸಲಾತಿಯ ಬೇಡಿಕೆ ಇಟ್ಟಿರುವ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮರಾಠ ಸಮುದಾಯದವರ ಮೀಸಲಾತಿ ಬೇಡಿಕೆಗೆ ರಾಜ್ಯ ಹಿಂದುಳಿದ ವರ್ಗದ ವರದಿ ಬಂದ ನಂತರ ಸಂವಿಧಾನದ ಚೌಕಟ್ಟಿನೊಳಗೆ ನ್ಯಾಯ ಒದಗಿಸಲು ಕ್ರಮ‌ಕೈಗೊಳ್ಳಲಾಗುವುದು ಭರವಸೆ ನೀಡಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮರಾಠ ಸಮುದಾಯದ 3 ಬಿ ಇಂದ 2 ಎ ಮೀಸಲಾತಿಯ ಬೇಡಿಕೆಗೆ ಸ್ಪಂದಿಸಿ ಸಮುದಾಯಕ್ಕೆ ನ್ಯಾಯ ಒದಗಿಸುವ ಚಿಂತನೆ ಸರ್ಕಾರಕ್ಕಿದೆ ಎಂದರು.

ಪ್ರಧಾನಿ ಮೋದಿ ಅವರು ರಾಜ್ಯದ ಹಿಂದುಳಿದ ವರ್ಗದವರಿಗೆ ಸಂವಿಧಾನತ್ಮಕವಾದ ಸ್ಥಾನಮಾನವನ್ನು ದೊರಕಿಸಿಕೊಟ್ಟಿದ್ದಾರೆ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು‌ ಎಂದಿದ್ದಾರೆ.

ಮರಾಠ ಸಮುದಾಯದ ಮಹನೀಯರ ಸಮಾಧಿಗಳು, ಐತಿಹಾಸಿಕ ಕುರುಹುಗಳ ಅಭಿವೃದ್ಧಿಗಾಗಿ ಡಿಪಿಆರ್ ಸಿದ್ಧಪಡಿಸಲು 10 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಸಂತ ರಾಮದಾಸ್, ತುಕಾರಂ, ಏಕನಾಥ್ ಅವರ ಆದರ್ಶಗಳು ಎಲ್ಲ ಕಾಲದಲ್ಲಿಯೂ ಪ್ರಭಾವವನ್ನು ಬೀರುತ್ತದೆ. ಮರಾಠ ಸಮುದಾಯದ ಗೌರವವನ್ನು, ಅಸ್ಮಿತೆಯನ್ನು ಉಳಿಸಲಾಗುವುದು ಎಂದು ತಿಳಿಸಿದರು.

ಗಡಿಭಾಗದ ಗ್ರಾಮಪಂಚಾಯತಿಗಳ ಸಮಗ್ರ ಅಭಿವೃದ್ಧಿ

ಕಾರವಾರದಿಂದ ಬೀದರ್ ವರೆಗೂ ಬಹುತೇಕ ಗಡಿ ಭಾಗಗಳಲ್ಲಿ ಮರಾಠಾ ಸಮುದಾಯ ನೆಲೆಸಿದೆ. ಈ ಗಡಿ ಭಾಗಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಗಡಿಭಾಗದ ಪ್ರತಿಯೊಂದ ಗ್ರಾಮಪಂಚಾಯತಿಗಳ ಸಮಗ್ರ ಅಭಿವೃದ್ಧಿ ಮಾಡುವ ತೀರ್ಮಾನ ಆಯವ್ಯಯದಲ್ಲಿ ಮಾಡಲಾಗಿದೆ. ಗಡಿಭಾಗದ ಸಂಪರ್ಕ ರಸ್ತೆ ಕಾಮಗಾರಿಗಳನ್ನು , ಗಡಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನವನ್ನು ಕೆಲವೇ ದಿನಗಳಲ್ಲಿ ಒದಗಿಸಲಾಗುವುದು ಎಂದರು

100 ಕೋಟಿ ರೂ. ಅನುದಾನ :

ಕರ್ನಾಟದಲ್ಲಿ ಈ ಸಮುದಾಯ ಮುಖ್ಯವಾಹಿನಿಯಲ್ಲಿ ಬೆರೆತಿದೆ. ಕರ್ನಾಟಕದ ಮರಾಠಾ ಸಮುದಾಯ ಕನ್ನಡಿಗರಾಗಿ ಮುಂದುವರೆಯುತ್ತದೆ ಎನ್ನುವ ಬಗ್ಗೆ ಎರಡು ಮಾತಿಲ್ಲ. ಮರಾಠ ಅಭಿವೃದ್ಧಿ ನಿಗಮದಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರಿಂದ ಹಿಡಿದು, ಯುವಕರಿಗೆ ಸ್ವಯಂ ಉದ್ಯೋಗ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿ 100 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದೆ‌ ಎಂದರು.