ಮೀಸಲಾತಿ ಪ್ರಮಾಣ ಹೆಚ್ಚಳ
ರಾಷ್ಟ್ರಪತಿ ಅಂಕಿತ ಹಾಕಿಸಿ ಹರ್ಷ ವ್ಯಕ್ತಪಡಿಸಿ: ಹೆಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ,19-  ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ, ಆದರೆ ಉಳಿದ ಕಾರ್ಯಗಳನ್ನೂ ತ್ವರಿತವಾಗಿ ಪೂರ್ಣಗೊಳಿಸುವ ಕಡೆಗೆ ಬಿಜೆಪಿ ನಾಯಕರು ಗಮನ ಹರಿಸಬೇಕು ಎಂದು ಕೆಪಿಸಿಸಿ  ಮಾದ್ಯಮ ವಕ್ತಾರ ವೆಂಕಟೇಶ್ ಹೆಗಡೆ ಹೇಳಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಮೀಸಲಾತಿ ಹೆಚ್ಚಳದ ಸುಗ್ರೀವಾಜ್ಞೆಗೆ ಹಾಲಿ ರಾಜ್ಯಪಾಲರ ಅಂಕಿತ ಹಾಕಿಸಿ,  ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣವನ್ನು 6% ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. (ಪರಿಶಿಷ್ಟ ಜಾತಿ 15+2=17 ಪರಿಶಿಷ್ಟ ಪಂಗಡ 3+4=7) ಇದು 6 ತಿಂಗಳ ಒಳಗೆ ರಾಜ್ಯದ ಎರಡೂ ಸದನಗಳಲ್ಲಿ ಮಂಡನೆ ಆಗಿ ಪಾಸಾಗಬೇಕು. ಅದಾದ ಬಳಿ ಕೇಂದ್ರ ಸರ್ಕಾರಕ್ಕೆ ತನ್ನ ಮೀಸಲಾತಿ ಪ್ರಮಾಣ ಹೆಚ್ಚಳದ ನಿರ್ಧಾರವನ್ನು ರವಾನಿಸಬೇಕು.
ಅಲ್ಲೂ ಸಹ ಲೋಕಸಭೆ, ರಾಜ್ಯ ಸಭೆಯಲ್ಲಿ ಈ ಮೀಸಲಾತಿ ಏರಿಕೆ ಮಾಡುವ ಮಸೂದೆ ಮಂಡನೆ ಆಗಬೇಕು. ಎರಡೂ ಸದನಲ್ಲಿ ಪಾಸಾದ ನಂತರ ಮಸೂದೆ ರಾಷ್ಟ್ರಪತಿ ಅಂಕಿತಕ್ಕೆ ರವಾನೆ ಆಗಬೇಕು. ರಾಷ್ಟ್ರಪತಿ ಅಂಕಿತ ಬಿದ್ದ ಮೇಲೆಯೇ ಮೀಸಲಾತಿ ಏರಿಕೆ ಕ್ರಮ ಕಾನೂನು ಬದ್ಧವಾಗಿ ಪೂರ್ಣಗೊಳ್ಳುತ್ತದೆ. ಈ ಎಲ್ಲಾ ಪ್ರಕ್ರಿಯೆ ಆದ ಮೇಲೆಯೇ ಸಂವಿಧಾನ ಬದ್ಧ ಮೀಸಲಾತಿ ಸಿಗುತ್ತದೆ.
ಆದರೆ, ಬಿಜೆಪಿ ನಾಯಕರು, ರಾಜ್ಯ ಸರ್ಕಾರ ಕೇವಲ ಸುಗ್ರೀವಾಜ್ಞೆ ಮೂಲಕ ಮೀಸಲಾತಿ ಹೆಚ್ಚಳ ಮಾಡುವ ನಿರ್ಧಾರ ಮಾಡಿದ್ದಕ್ಕೇ ಎಲ್ಲಾ ಆಗಿ ಹೋಯಿತು ಎಂದು ಜನರನ್ನು ನಂಬಿಸಲು ಹೊರಟಿದ್ದಾರೆ. ಇದು ಸರಿ ಅಲ್ಲ.
ಗೌರವಾನ್ವಿತ,  ವಾಲ್ಮೀಕಿ ಸಮಾಜದ ಶ್ರೀಗಳು ವರ್ಷಗಟ್ಟಲೇ ಧರಣಿ ಕುಳಿತು ಮೀಸಲಾತಿ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರು. ಇದರ ಫಲವಾಗಿಯೇ  ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು  ಸುಗ್ರೀವಾಜ್ಞೆ ಹೊರಡಿಸಿದೆ. ಸರ್ಕಾರದ ತೀರ್ಮಾನ ನಿಜಕ್ಕೂ ಪರಿಶಿಷ್ಟ ಪಂಗಡದ ಜನರ ಒಳಿತಿಗೆ ಆಗಿದ್ದರೆ ಚುನಾವಣೆ ಘೋಷಣೆಗೂ ಮುನ್ನ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸುವ ಕಡೆ ಬಿಜೆಪಿ ನಾಯಕರು ಗಮನ ಹರಿಸಬೇಕು. ಇದೆಲ್ಲಾ ಆದ ಮೇಲೆ ಹರ್ಷ ವ್ಯಕ್ತಪಡಿಸಬೇಕು ಎಂದಿದ್ದಾರೆ.