
ಬೆಂಗಳೂರು,ಏ.೩:ರಾಜ್ಯಸರ್ಕಾರ ಜಾರಿ ಮಾಡಿರುವ ನೂತನ ಮೀಸಲಾತಿ ನೀತಿಯನ್ನು ರದ್ದು ಮಾಡಲು ಕಾಂಗ್ರೆಸ್‌ಗೆ ಶಕ್ತಿ ಇಲ್ಲ. ಅದಕ್ಕೆ ಅವಕಾಶವೂ ಇಲ್ಲ, ಈ ಮೀಸಲಾತಿ ನೀತಿಯನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಮಾಡುತೇವೆ ಎಂಬ ಹೇಳಿಕೆಗೆ ಕಿಡಿಕಾರಿ. ಆ ಶಕ್ತಿ ಕಾಂಗ್ರೆಸ್‌ಗೆ ಇಲ್ಲ ಅದಕ್ಕೆ ಅವಕಾಶವೂ ಸಿಗಲ್ಲ ಎಂದರು.ಮೀಸಲಾತಿಯನ್ನು ರದ್ದು ಮಾಡಲಾಗುವುದು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಪಕ್ಷ ದಲಿತರ, ಹಿಂದುಳಿದ ವರ್ಗದ, ಲಿಂಗಾಯತ, ಒಕ್ಕಲಿಗರ ವಿರೋಧಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿ ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ನಾವು ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಮಾಡಿದ್ದೇವೆ. ಇದರಿಂದ ರಾಜಕೀಯವಾಗಿ ತಳಮಳಗೊಂಡಿರುವ ಕಾಂಗ್ರೆಸ್ ಪಕ್ಷ ಮೀಸಲಾತಿ ರದ್ದು ಮಾಡುವ ಮಾತುಗಳನ್ನಾಡುತ್ತಿದೆ ಇದು ಆಗಲ್ಲ ಕಾಂಗ್ರೆಸ್ ಪಕ್ಷ ಹತಾಶಗೊಂಡಿದೆ ಎಂದು ಹರಿಹಾಯ್ದರು.ಕಾಂಗ್ರೆಸ್‌ನ ವಕ್ತಾರರು ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಮೀಸಲಾತಿ ಸಂಬಂಧ ಮಾಡಿರುವ ಟ್ವೀಟ್‌ಗಳನ್ನು ಗಮನಿಸುತ್ತಿದ್ದೇನೆ. ನಾವು ಕೊಟ್ಟಿರುವ ಮೀಸಲಾತಿ ಕಾನೂನುಬಾಹಿರ, ಸಂವಿಧಾನ ವಿರೋಧಿ ಎಂದು ಕೆಳಮಟ್ಟದ ಶಬ್ಧಗಳನ್ನು ಬಳಸಿದ್ದಾರೆ. ಇದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಮೇಲೆ ಪ್ರೀತಿ ಇಲ್ಲ, ಅವರು ಬರೆದಿರುವ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಜನಸಂಖ್ಯೆಯಾಧಾರದ ಮೇಲೆ ಮೀಸಲಾತಿ ಕೊಡಬೇಕು ಎಂದು ಸಂವಿಧಾನದಲ್ಲಿದೆ. ಅದಕ್ಕೆ ಅನುಗುಣವಾಗಿ ನಾವು ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಷೆಡ್ಯೂಲ್ ೯ಕ್ಕೆ ಸೇರಿಸುವಂತೆ ಶಿಫಾರಸ್ಸು ಮಾಡಿದ್ದೇವೆ ಎಂದರು.ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿ ಪಂಗಡಗಳಿಗೆ ಏನೂ ಮಾಡಲಿಲ್ಲ. ಅವರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡರು. ನಾವು ಸಾಮಾಜಿಕ ನ್ಯಾಯ ಕೊಡುವುದನ್ನು ಟೀಕೆ ಮಾಡುತ್ತಿದ್ದಾರೆ ಎಂದರು.ಪರಿಶಿಷ್ಟ ಜಾತಿ ಸಮುದಾಯದ ಮೀಸಲಾತಿ ಹೆಚ್ಚಳ ಸಂಬಂಧ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ನೀಡಿ ೪ ವರ್ಷ ಆಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವರದಿ ಬಂದಿದ್ದು, ನಂತರ ನಾವು ಕೂಡಲೇ ಸಚಿವ ಸಂಪುಟ ಸಭೆ ನಡೆಸಿ ಮೀಸಲಾತಿ ಏರಿಕೆಯ ತೀರ್ಮಾನಮಾಡಿ ಕಾಯ್ದೆಯನ್ನು ಮಾಡಿದ್ದೇವೆ. ಸರ್ಕಾರದ ಆದೇಶ ಹೊರಡಿಸಿ ಷೆಡ್ಯೂಲ್ ೯ ಸೇರ್ಪಡೆ ಶಿಫಾರಸ್ಸನ್ನೂ ಮಾಡಿದ್ದೇವೆ ಎಂದರು.ಮೀಸಲಾತಿ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಆದೇಶವನ್ನು ಮಾಡಿದ್ದೇವೆ. ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ಪಕ್ಷ ದಲಿತ, ಹಿಂದುಳಿದ, ಲಿಂಗಾಯತ, ಒಕ್ಕಲಿಗ ವಿರೋಧಿ ಎಂಬುದು ಸಾಬೀತಾಗಿದೆ ಎಂದರು.