ಮೀಸಲಾತಿ ಕೈ ಅಪ್ರಚಾರ ಬಿಎಸ್‌ವೈ ಕಿಡಿ

ಬೆಂಗಳೂರು,ಮಾ.೩೦-ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಇದು ಸರಿಯಲ್ಲ. ಬಂಜಾರ ಸಮುದಾಯದವರಿಗ ಒಳಮೀಸಲಾತಿ ಸಂಬಂಧ ತಪ್ಪು ಗ್ರಹಿಕೆಯಾಗಿದೆ. ಅವರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರ ಜಾರಿ ಮಾಡಿರುವ ಮೀಸಲಾತಿ ನೀತಿಯಿಂದ ಎಲ್ಲ ಸಮುದಾಯದವರಿಗೂ ನ್ಯಾಯ ಸಿಕ್ಕಿದೆ. ಯಾರಿಗೂ ಅನ್ಯಾಯ ಆಗಿಲ್ಲ ಎಂದರು.
ಮೀಸಲಾತಿ ಪ್ರಮಾಣವನ್ನು ಏರಿಸುವ ಮೂಲಕ ವಿವಿಧ ಸಮುದಾಯಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ಮುಸ್ಲಿಮರಿಗೂ ಅನ್ಯಾಯ ಆಗಿಲ್ಲ. ಮುಸ್ಲಿಮರನ್ನು ಆರ್ಥಿಕ ದುರ್ಬಲ ವರ್ಗದ ಮೀಸಲಾತಿ ಅಡಿ ತರಲಾಗಿದೆ ಎಂದರು.
ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಸ್ಲಿಮರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ ಎಂದರು.
ಯಾರು ವಾಪಸ್ ಹೋಗಲ್ಲ
ಬಿಜೆಪಿಗೆ ಸೇರ್ಪಡೆಯಾಗಿರುವ ಯಾರೂ ಮತ್ತೆ ಕಾಂಗ್ರೆಸ್‌ಗಾಗಲಿ, ಜೆಡಿಎಸ್‌ಗಾಗಲಿ ಹೋಗಲ್ಲ. ಎಲ್ಲರೂ ಬಿಜೆಪಿಯಲ್ಲೇ ಇರುತ್ತಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ, ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ನೋಡಿ ಕಾಂಗ್ರೆಸ್‌ನವರು ದಿಗ್ಭ್ರಾಂತರಾಗಿದ್ದಾರೆ. ಹಾಗಾಗಿ, ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನಾವೂ ಕೂಡ ೩ ಸರ್ವೆ ಮಾಡಿಸಿದ್ದೇವೆ. ಎಲ್ಲದರಲ್ಲೂ ಬಿಜೆಪಿಗೆ ಬಹುಮತ ಬಂದಿದೆ ಎಂದರು.
ಟಿಕೆಟ್ ಹೈ ಕಮಾಂಡ್ ತೀರ್ಮಾನ
ಯಾರಿಗೆ ಟಿಕೆಟ್ ಕೊಡಬೇಕು, ಒಂದೇ ಕುಟುಂಬಕ್ಕೆ ಒಂದೇ ಟಿಕೆಟ್, ವರುಣಾದಲ್ಲಿ ಸಿದ್ದರಾಮಯ್ಯರವರ ವಿರುದ್ಧ ವಿಜಯೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿಸುವ ವಿಚಾರ ಸೇರಿದಂತೆ ಎಲ್ಲದರ ಬಗ್ಗೆಯೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ವರುಣಾದಲ್ಲಿ ಸಿದ್ದರಾಮಯ್ಯ ಗೆಲುವು ಸುಲಭ ಇದೆ ಎಂದು ನನಗೆ ಅನ್ನಿಸುತ್ತಿಲ್ಲ. ನಾವಂತೂ ಸಮರ್ಥ ಅಭ್ಯರ್ಥಿಯನ್ನು ಇಲ್ಲಿ ನಿಲ್ಲಿಸುತ್ತೇವೆ ಎಂದರು.
ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರುವುದು ಶತಸಿದ್ಧ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಯಡಿಯೂರಪ್ಪರವರನ್ನು ಭೀಷ್ಮ, ಬೊಮ್ಮಾಯಿ ಅವರನ್ನು ಶಕುನಿಗೆ ಹೋಲಿಸಿ ಅಪಪ್ರಚಾರ ಮಾಡುತ್ತಿದೆ. ಈ ಹೋಲಿಕೆ ಸರಿಯಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಶೋಭಾಕರಂದ್ಲಾಜೆ, ಭಗವಾನ್‌ಕೂಬಾ ಮತ್ತಿತರರು ಉಪಸ್ಥಿತರಿದ್ದರು.