
ಬಿಜೆಪಿಗೆ ೯ ಪ್ರಶ್ನೆ
ಮೈಸೂರು,ಏ.೨೬- ಮುಸ್ಲಿಂಮರ ಶೇಕಡಾ ನಾಲ್ಕು ಮೀಸಲಾತಿಯನ್ನು ರದ್ದು ಮಾಡಿದ ಬಿಜೆಪಿ ಸರ್ಕಾರ ಅದನ್ನು ಸುಪ್ರೀಂಕೋರ್ಟ್ ಮುಂದೆ ಸಮರ್ಥಿಸಿಕೊಳ್ಳಲು ವಿಫಲವಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಮೀಸಲಾತಿ ಬರೀ ಲಾಲಿಪಾಪ್ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗೇಲಿ ಮಾಡಿದ್ದಾರೆ.
ಮೈಸೂರಿನಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಸ್ಲಿಂ ಮೀಸಲಾತಿ ರದ್ದು ಮಾಡಿದ ಆದೇಶವನ್ನೇ ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ ಮೀಸಲಾತಿ ಹೆಸರಲ್ಲಿ ಸುಳ್ಳು ಹೇಳುತ್ತಿರುವ ಬಿಜೆಪಿಗೆ ಹಿನ್ನೆಡೆ ಆಗಿದೆ. ಇದು ಡಬ್ಬಲ್ ಇಂಜಿನ್ ಸರ್ಕಾರದ ಮೋಸ. ಲಿಂಗಾಯತ, ಒಕ್ಕಲಿಗೆ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಸರಿನಲ್ಲಿ ಮೋಸ ಮಾಡಿದೆ ಎಂದರು.
ಮೀಸಲಾತಿ ಬದಲಾವಣೆ/ಪರಿಷ್ಕರಣೆಯನ್ನು ಸಮರ್ಥಿಸಿಕೊಳ್ಳಲಾಗದ ಬಿಜೆಪಿ ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ವಂಚನೆ ಮಾಡಿದ್ದು ಯಾಕೆ ಸುಪ್ರೀಂಕೋರ್ಟ್ ನಲ್ಲಿ ಯಾಕೆ ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲಿಲ್ಲ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೀಸಲಾತಿ ಕೇಸ್‌ಗೆ ಸಂಬಂಧಪಟ್ಟಂತೆ ಯಾಕೆ ಅಫಿಡವಿಟ್ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದರು.
ಎಸ್ ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಶಿಫಾರಸನ್ನು ಮೋದಿ ಸರ್ಕಾರ ಮಾರ್ಚ್ ೧೪ರಂದು ತಿರಸ್ಕರಿಸಿದ್ದು ಯಾಕೆ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ ೯ನೇ ಪರಿಚ್ಛೇದಕ್ಕೆ ಯಾಕೆ ಸೇರಿಸಲಿಲ್ಲ ಎಸ್ಸಿ, ಎಸ್ಟಿ. ಒಬಿಸಿ, ಲಿಂಗಾಯತ, ಒಕ್ಕಲಿಗ ಮತ್ತು ಇತರೆ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಲು ಶೇ.೫೦ರಷ್ಟು ಮೀಸಲಾತಿ ಮಿತಿಯನ್ನು ಯಾಕೆ ತೆಗೆದುಹಾಕಲಿಲ್ಲ ಅಲ್ಪಸಂಖ್ಯಾತರ ಮೀಸಲಾತಿಯನ್ನು ಅನ್ಯಾಯವಾಗಿ ಟಾರ್ಗೆಟ್ ಮಾಡಿದ್ದು ಯಾಕೆ ಬಸವರಾಜ ಬೊಮ್ಮಾಯಿ ಸರ್ಕಾರ ತಮ್ಮದೇ ಸರ್ಕಾರದ ಹೇಳಿಕೆಯನ್ನು ಸುಪ್ರೀಂಕೋರ್ಟ್ ನಲ್ಲಿ ಯಾಕೆ ಸಮರ್ಥಿಸಿಕೊಳ್ಳಲಿಲ್ಲ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಉಂಟು ಮಾಡಿದ ಗೊಂದಲಕ್ಕಾಗಿ ಮೋದಿ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಾರಾ ಎಂಬ ಒಂಭತ್ತು ಪ್ರಶ್ನೆಯನ್ನು ಬಿಜೆಪಿ ಮುಂದಿರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಬಿಜೆಪಿ ವಿಶ್ವಾಸ ದ್ರೋಹ ಎಂಬುದು ಸುಪ್ರೀಂಕೋಟ್‌ನಲ್ಲಿ ಸಾಬೀತಾಗಿದೆ ಎಂದರು.
ಮೃತ್ಯುಂಜಯ ಸ್ವಾಮೀಜಿಗಳು ಹೇಳಿದಂತೆ ತಲೆ ಮೇಲೆ ತುಪ್ಪ ಇಟ್ಟಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ತಿಳಿಸಿದರು.
ಲಿಂಗಾಯತರು, ಒಕ್ಕಲಿಗರು, ಭಿಕ್ಷುಕರ ಜನಸಂಖ್ಯೆ ಆಧಾರದ ಮೇಲೆ ಅಲ್ಪ ಸಂಖ್ಯಾತರ ಮೀಸಲಾತಿ ಕಿತ್ತು ಹಾಕಿ ಕೊಟ್ಟಿದ್ದಾರೆ. ಸರ್ವರಿಗೂ ಸಮಪಾಲು ಸಮಬಾಳು ಎಂಬುದನ್ನು ಹೇಳಿದ್ದೇವೆ. ತಮಿಳುನಾಡಿನಂತೆ ಶೇ.೫೦ ರಷ್ಟು ಮೀಸಲಾತಿಯನ್ನು ಎಲ್ಲರಿಗೂ ಹಂಚೋಣವೆಂದು ಹೇಳಿದ್ದೇವೆ ಆದರೆ. ಲಿಂಗಾಯತರಿಗೆ, ಒಕ್ಕಲಿಗರಿಗೆ ಬಿಜೆಪಿ ಮೋಸ ಮಾಡಿದೆ ಎಂದು ದೂರಿದರು.
ಬಿಜೆಪಿಯಿಂದ ಯಾರಿಗೆ ಅನುಕೂಲವಾಗಿದೆ ರೈತರು ಯುವಕರು ವರ್ತಕರಿಗೆ ಬಿಜೆಪಿ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಈಗ ಕಾಂಗ್ರೆಸ್ ನಾಯಕರಾಗಿರುವ ಜಗದೀಶ್ ಶೆಟ್ಟರ್ ಅವರು ಈ ಬಾರಿ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ೪೦ಸ್ಥಾನಕ್ಕೆ ನಿಲ್ಲುತ್ತೆ. ಕಾಂಗ್ರೆಸ್ ೧೫೦ ಸ್ಥಾನಕ್ಕೆ ಬರುತ್ತದೆ. ಆದ್ದರಿಂದ ೧೫ದಿನದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ನಾನು ರಕ್ತದಲ್ಲೇ ಬರೆದುಕೊಡುತ್ತೇನೆ ಎಂದು ಸವಾಲು ಹಾಕಿದರು.
ಯಡಿಯೂರಪ್ಪ ಅವರು ಪಕ್ಷ ಬಿಟ್ಟ ಯಾರೋ ನಾಲ್ಕು ಜನರನ್ನು ಸೋಲಿಸಲು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ಯಾರನ್ನೋ ಸೋಲಿಸುವುದು ನಿಮ್ಮ ಗುರಿಯೇ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ವಕ್ತಾರ ಎಂ.ಲಕ್ಷ್ಮಣ್ ಉಪಸ್ಥಿತರಿದ್ದರು.