ಮೀಸಲಾತಿಯಿಂದ ಸಮಾನ ಅವಕಾಶ

ಕೆಂಗೇರಿ.ಸೆ೨೪: ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೂ ಅವಕಾಶ ವಂಚಿತ ಸಮುದಾಯಗಳಿಗೆ ಮೀಸಲಾತಿ ವ್ಯವಸ್ಥೆ ಕಲ್ಪಿಸುವ ಮೂಲಕ ರಾಜಕೀಯ ಅಧಿಕಾರ ಪಡೆಯಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಿದ್ದಾರೆ ಎಂದು ಮಾಜಿ ಸಹಕಾರ ಸಚಿವ ಹಾಲಿ ಶಾಸಕ ಎಸ್. ಟಿ. ಸೋಮಶೇಖರ್ ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ಉಪನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಅಂಬೇಡ್ಕರ್ ಭವನದ ಉದ್ಘಾಟನೆ ಹಾಗೂ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು ತಳ ಸಮುದಾಯದವರ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಪ್ರಗತಿಗೆ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಅಬಕಾರಿ ಇಲಾಖೆಯ ಉಪ ಆಯುಕ್ತ ಎನ್.ಎಸ್. ರವಿಶೇಖರ್ ಮಾತನಾಡಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಬೇಕಿದೆ ಎಂದರು ಯಾವುದಕ್ಕೂ ಅಂಜಬೇಕಾಗಿಲ್ಲ ತಪ್ಪನ್ನು ಪ್ರಶ್ನಿಸುವ ಮನೋಭಾವ ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಉಪನ್ಯಾಸಕಿ ಬಿ. ಯು. ಸುಮಾ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಿತಿ ಸದಸ್ಯರಾದ ರಾಹುಲ್ ಧರ್ಮಸೇನಾ, ಕಾಂತರಾಜ್ ಎಂಎಲ್, ಶರತ್ ಕುಮಾರ್. ಎಸ್ ,ನವಾಜ್ ಆಲಂ ,ಚಾಮುಂಡಿ ಶಿವಕುಮಾರ್, ಶೈಲೇಶ್ ವಿವೇಕ್ ಶರ್ಮಾ, ಸಾಮಾಜಿಕ ಹೋರಾಟಗಾರ ಡಿಎಸ್‌ಎಸ್ ವೆಂಕಟೇಶ್ ಹೊನ್ನಯ್ಯ, ಚಲಪತಿ, ಶಿವನಪಾಳ್ಯ ಜಿ. ಸತ್ಯ, ಶ್ರೀನಿವಾಸ್ ಡಿ., ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.