ಮೀಸಲಾತಿಯಿಂದ ಮಹಿಳೆಯರಿಗೆ ಅವಕಾಶ: ಪುಷ್ಪಾ ಅಮರನಾಥ

ದೇವದುರ್ಗ.ಮಾ.೨೭-ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಎಲ್ಲ ರಂಗದಲ್ಲಿ ಮಿಂಚಲು ಕಾರಣ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿವೆ. ಮಹಿಳಾ ಮೀಸಲಾತಿಯಿಂದಾಗಿಯೇ ಮಹಿಳೆಯರು ಇಂದು ಮನೆಯಿಂದ ಹೊರಬಂದು ಸಾಧನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು.
ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ಎ.ವಿ.ಎನ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಸ್ಥಳೀಯ ಸಂಸ್ಥೆಗಳಲ್ಲೂ ಮೀಸಲು ದೊರೆತಿದ್ದರಿಂದ ಅಡುಗೆ ಮಾಡುವ ಮಹಿಳೆ ಗ್ರಾಪಂ ಅಧ್ಯಕ್ಷ ಗಾದಿ ಹಿಡಿಯುತ್ತಿದ್ದಾಳೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
ಇಂದು ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯದೊರೆಯುತ್ತಿದೆ. ರಾಜಕೀಯದ ಉನ್ನತ ಹುದ್ದೆಯಲ್ಲೂ ಸ್ತ್ರೀಯರಿಗೆ ಮೀಸಲು ಸಿಗಬೇಕು. ಲಿಂಗ ಸಮಾನತೆ ಸಾಧಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಮಹಿಳೆಯರು ರಾಜಕೀಯದಲ್ಲಿ ಬೆಳೆಯಲು ಕುಟುಂಬದ ಸಹಕಾರ ಅಗತ್ಯವಾಗಿದೆ. ಮಹಿಳೆಯರು ಸರ್ಕಾರದಿಂದ ನೀಡುವ ವಿವಿಧ ಯೋಜನೆಗಳ ಲಾಭ ಪಡೆದು, ಜೀವನದಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಶ್ರೀದೇವಿ ನಾಯಕ ಮಾತನಾಡಿ, ಹಿಂದೆ ಮಹಿಳೆಯರಿಗೆ ಅವಕಾಶಗಳು ಕಡಿಮೆಯಿದ್ದವು. ಮನೆಯ ನಾಲ್ಕು ಗೋಡೆಗೆ ಸೀಮಿತವಾಗಿದ್ದಳು. ಉದ್ಯೋಗದಲ್ಲೂ ಹೆಚ್ಚಿನ ಒತ್ತಡ, ಕಿರಿಕಿರಿ ಅನುಭವಿಸುವ ಸ್ಥಿತಿ ಬಂದಿತ್ತು. ಆದರೆ, ಸಂವಿಧಾನ ರಚನೆ ನಂತರ ಶೋಷಣೆ ಕಡಿಮೆಯಾಗಿ, ಅವಕಾಶಗಳು ಹೆಚ್ಚಾಗಿವೆ. ಮೀಸಲಾತಿಯಿಂದ ಮಹಿಳೆಯರು ಗ್ರಾಪಂಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಗ್ರಾಪಂಯಲ್ಲಿ ಚುನಾಯಿತರಾದ ಮಹಿಳಾ ಸದಸ್ಯರಿಗೆ ಸನ್ಮಾನಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಪಕ್ಷಾತೀತವಾಗಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಡವರು, ನಿರ್ಗತಿಕರು ಹಾಗೂ ದಲಿತರಿಗೆ ಸಹಾಯ ಮಾಡುವ ಅವಕಾಶ ನನಗೆ ಒದಗಿಬಂದಿತ್ತು. ತೃಪ್ತಿಯಿಂದ ಸೇವೆ ಮಾಡಿದ್ದೇನೆ ಎಂದು ಹೇಳಿದರು.
ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಶ್ರೀವರದಾನೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಮಹಿಳಾ ಸದಸ್ಯರಿಗೆ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಂಗಳಮುಖಿಯರ ಸಂಘದ ರಾಜ್ಯಾಧ್ಯಕ್ಷೆ ಚರಿತಾ ಕೊಂಕಲ್, ಕೆಪಿಸಿಸಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ನಿರ್ಮಲಾ ಬೆಣ್ಣೆ, ಡಾ.ಅಂಬಿಕಾ ಮಧುಸುಧನ್, ಎಂ.ಆರ್.ಸುನೀತಾ, ದ್ರಾಕ್ಷಾಯಿಣಿ, ಶಾರದ ನಾಯಕ, ಜಿಪಂ ಸದಸ್ಯೆ ಜಯಶ್ರೀ ಶರಣಗೌಡ, ವಿಜಯಲಕ್ಷ್ಮಿ, ಅಮೃತಾ ಪಾಟೀಲ್, ದಂಡಮ್ಮ ಅಕ್ಕರಕಿ, ಪುರಸಭೆ ಉಪಾಧ್ಯಕ್ಷೆ ಸಾಬಮ್ಮ ಗುಂಡಪ್ಪ ಇತರರಿದ್ದರು.