ಶಿಕಾರಿಪುರ, ಮಾ.೨೭- ಒಳ ಮಿಸಲಾತಿಗೆ ವಿರೋಧ ವ್ಯಕ್ತಪಡಿಸಿ ಶಿಕಾರಿಪುರ ತಾಲೂಕಿನ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿ ಮಾಡಿರುವ ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿ ಇಂದು ಶಿಕಾರಿಪುರದಲ್ಲಿ ತಾಲೂಕು ಬಂಜಾರ ಸಮಿತಿ ಪ್ರತಿಭಟನೆಗೆ ಕರೆ ನೀಡಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನೂರಾರು ಬಂಜಾರ ಸಮುದಾಯದವರು ಪಟ್ಟಣದಲ್ಲಿರುವ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಯಡಿಯೂರಪ್ಪನವರ ಮನೆ ಬಳಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಮನೆಗೆ ನುಗ್ಗಲು ಪ್ರಯತ್ನ ನಡೆಸಿದರು. ಇದರ ನಡುವೆಯೇ ಕೆಲವರು ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಿ ಮಹಡಿ ಹತ್ತಿ ಅಲ್ಲಿಯೇ ಧ್ವಜ ಹಿಡಿದುಕೊಂಡು ಮೀಸಲಾತಿ ವಿರೋಧಿ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದರು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಯಡಿಯೂರಪ್ಪನವರ ಮನೆ ಸುತ್ತ ಪೊಲೀಸರ ಕಾವಲನ್ನು ಬಿಗಿಗೊಳಿಸಲಾಗಿದೆ.
ಪೊಲೀಸ್ ಲಾಠಿ ಪ್ರಹಾರದಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಡಿಯೂರಪ್ಪನವರ ಮನೆ ಮುಂದಿನ ರಸ್ತೆಯಲ್ಲಿ ಚಪ್ಪಲಿಗಳು, ಬಟ್ಟೆಗಳು ಅಡ್ಡಾದಿಡ್ಡಿ ಬಿದ್ದಿತ್ತು. ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ.