ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ಬಾಲಕರಿಬ್ಬರ ಸಾವು

ಕಲಬುರಗಿ,ಜು.12-ಅಫಜಲಪುರ ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಗೊಬ್ಬೂರ (ಕೆ) ಗ್ರಾಮದ ವಿಶ್ವದೀಪ ಭೋವಿ (16) ಮತ್ತು ದಿಲೀಪ ಭೋವಿ (17) ಮೃತಪಟ್ಟ ಬಾಲಕರು.
ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿನ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಈಜು ಬಾರದೆ ಕೆರೆಯ ಕೆಸರಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವರ್ಷದಲ್ಲಿ 6 ಜನರ ಸಾವು
ಕೊಳ್ಳೂರ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಕಳೆದ 3 ವರ್ಷಗಳ ಅವಧಿಯಲ್ಲಿ 6 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಕೊಳ್ಳೂರ ಗ್ರಾಮದ ಇಬ್ಬರು ಮತ್ತು ಕಲಬುರಗಿಯ ಇಬ್ಬರು ಬಾಲಕರು ಮೃತಪಟ್ಟಿದ್ದರು.
ಇದೀಗ ಗೊಬ್ಬೂರ (ಕೆ) ಗ್ರಾಮದ ಇಬ್ಬರು ಬಾಲಕರು ಮೃತಪಟ್ಟಿದ್ದು, ಆ ಮೂಲಕ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಇಲ್ಲಿಯವರಗೆ 6 ಜನ ಮೃತಪಟ್ಟಂತಾಗಿದೆ.
ತಂತಿ ಬೇಲಿ ಹಾಕಿ
ಕೊಳ್ಳೂರ ಕೆರೆಯಲ್ಲಿ ಮೀನು ಹಿಡಿಯಲು ಮತ್ತು ಈಜಲು ಹೋಗಿ ಜನ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸಲು ಕೆರೆಯ ಸುತ್ತಮುತ್ತ ತಂತಿ ಬೇಲಿ ಹಾಕಬೇಕು ಎಂದು ಕೊಳ್ಳೂರ ಗ್ರಾಮಸ್ಥರ ಪರವಾಗಿ ಗ್ರಾಮದ ಮುಖಂಡ ದಸ್ತಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ.