ಮೀನು ಹಿಡಿಯಲು ಹೋದ ತಂದೆ-ಮಗ ನೀರು ಪಾಲು

ಕಲಬುರಗಿ: ಏ.4 :ಭೀಮಾ ನದಿಯಲ್ಲಿ ಮೀನು ಹಿಡಿಯಲು ಹೋದ ತಂದೆ-ಮಗ ಜಲಸಮಾದಿಯಾದ ಘಟನೆ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿ ಭೀಮಾನದಿಯಲ್ಲಿ ನಡೆದಿದೆ.
ಮೈಬೂಬ್ ಸಾಬ್ ತಂದೆ ಅಬ್ದುಲ್ ಕರೀಂ ಕೋಬಾಳ (೫೬) ಹಾಗೂ ಜಾವೇದ್ ತಂದೆ ಮೈಬೂಬ್ ಸಾಬ್ (19) ಸಾ.ಕಟ್ಟಿಸಂಗಾವಿ ಸಾವನ್ನಪ್ಪಿದ್ದಾರೆ. ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು ನಿನ್ನೆ ಮಧ್ಯಾಹ್ನ ಭೀಮಾನದಿಯಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ. ಇವರು ಬಹಳ ಕಡುಬಡತನದಿಂದ ಜೀವನ ಸಾಗಿಸುತ್ತಿದ್ದರು.ಇವರ ಸಾವಿನಿಂದ ಕುಟುಂಬ ಬೀದಿಪಾಲಾಗಿದೆ .
ಈ ಸುದ್ದಿ ತಿಳಿದ ಶಾಸಕ ಡಾಕ್ಟರ್ ಅಜಯ ಸಿಂಗ್ ಭೇಟಿ ನೀಡಿ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಿ ಕೊಡುವ ಭರವಸೆ ನೀಡಿದರು. ಘಟನಾ ಸ್ಥಳಕ್ಕೆ ಜೇವರ್ಗಿ ಪಿಎಸ್ಐ ಸಂಗಮೇಶ ಅಂಗಡಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.