ಮೀನುಗಾರರ ಪುನಶ್ಚೇತನಕ್ಕೆ ಬದ್ಧ

ಬೆಂಗಳೂರು, ಜು. ೩೦- ರಾಜ್ಯದ ಮೀನುಗಾರರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮೀನುಗಾರರಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮೀನುಗಾರಿಕೆ ಇಲಾಖೆಯ ಮಾಹಿತಿಗಳನ್ನೊಳಗೊಂಡ ಅಂಕಿ-ಅಂಶಗಳ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೀನು ಕೃಷಿಕರ ಅಭಿವೃದ್ಧಿಗಾಗಿ ಈ ವರ್ಷದ ಬಜೆಟ್‌ನಲ್ಲಿ ೨೯೧ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಹಾಗೆಯೇ ಕರಾವಳಿ ಅಭಿವೃದ್ಧಿಗಾಗಿ ೪೫೦ ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.
ಯಾಂತ್ರೀಕೃತ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ವಾರ್ಷಿಕ ೧೫೦ ಕೋಟಿ ರೂ.ಗಳ ಡೀಸೆಲ್ ಸಬ್ಸಿಡಿಯನ್ನು ಮೀನುಗಾರರಿಗೆ ನೀಡಲಾಗುತ್ತಿದೆ. ಹಿನ್ನೀರು ಮೀನು ಕೃಷಿ ಅಭಿವೃದ್ಧಿಗೆ ಒತ್ತು ನೀಡಲು ಮಲ್ಪೆಯಲ್ಲಿ ಸೀಗಡಿ ಕೃಷಿ ಕೇಂದ್ರವನ್ನು ೨ ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಹಾಗೆಯೇ ಆಧುನಿಕ ಮೀನು ಕೃಷಿಯಲ್ಲಿ ತೊಡಗಿಕೊಳ್ಳುವ ಕೃಷಿಕರಿಗೂ ನೆರವನ್ನು ನೀಡಲಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಮತ್ಸ್ಯ ಸಂಪದ ಯೋಜನೆಯಡಿ ಹೆಚ್ಚಿನ ಅನುದಾನವನ್ನು ಪಡೆಯಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ತಾವು ಮುಖ್ಯಮಂತ್ರಿಯಾದ ತಕ್ಷಣ ಮೀನುಗಾರರ ೬೦ ಕೋಟಿ ರೂ. ಸಾಲವನ್ನು ಮನ್ನಾ ಮಾಡುವ ತೀರ್ಮಾನ ಕೈಗೊಂಡೆ. ರಾಜ್ಯ ಮೀನು ಉತ್ಪಾದನೆಯಲ್ಲಿ ದೇಶದಲ್ಲಿ ೪ನೇ ಸ್ಥಾನದಲ್ಲಿದ್ದು, ರಾಜ್ಯ ಸರ್ಕಾರ ಕೈಗೊಂಡಿರುವ ಮೀನು ಕೃಷಿಕರ ಪ್ರೋತ್ಸಾಹ ಕಾರ್ಯಕ್ರಮಗಳಿಂದ ದೇಶದಲ್ಲೇ ಮೊದಲನೇ ಸ್ಥಾನಕ್ಕೆ ಏರುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಕಾಲಿಕವಾಗಿ ಮರಣ ಹೊಂದಿದ ಮೀನುಗಾರರ ಕುಟುಂಬಕ್ಕೆ ೬ ಲಕ್ಷ ರೂ.ಗಳ ಪರಿಹಾರದ ಚೆಕ್‌ನ್ನು ವಿತರಿಸಿದರು ಹಾಗೂ ಫಲಾನುಭವಿ ಮೀನುಗಾರರಿಗೆ ಮೀನು ಮರಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಖೋಟಾ ಶ್ರೀನಿವಾಸ್ ಪೂಜಾರಿ, ಭೈರತಿ ಬಸವರಾಜು, ಆರ್. ಅಶೋಕ್, ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ನಿರ್ದೇಶಕ ರಾಮಕೃಷ್ಣ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.