ಮೀನುಗಾರರ ನಡುವೆ ಘರ್ಷಣೆ: ೧೪ ಮಂದಿಗೆ ನ್ಯಾಯಾಂಗ ಬಂಧನ

ಬೈಂದೂರು, ನ.೧೦- ಕೊಡೇರಿಯಲ್ಲಿ ಕಿರು ಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆ ವಿಚಾರದಲ್ಲಿ ಮೀನುಗಾರರ ನಡುವೆ ನಡೆದ ಘರ್ಷಣೆ ಹಾಗೂ ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಬಾಟಲಿ ಹಾಗೂ ಚಪ್ಪಲಿ ಎಸೆದು ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ 14 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಿರಿಮಂಜೇಶ್ವರ ಕೊಡೇರಿ ನಿವಾಸಿಗಳಾದ ಸುಬ್ರಮಣ್ಯ ಕುಮಾರ್ (31), ಪ್ರಕಾಶ್(33), ಅಂಬರೀಶ್ (29), ಶ್ರೀಕಾಂತ ಖಾರ್ವಿ (26), ಬೈಂದೂರು ಕಾಲ್ತೋಡು ಶಂಕರ ನಾಯ್ಕ್ (25), ಕೊಡೇರಿ ಮೂಲದ ಸುಬ್ರಮಣ್ಯ ಖಾರ್ವಿ (30), ಪ್ರಕಾಶ ಖಾರ್ವಿ (24), ರೋಹಿತ್ ಖಾರ್ವಿ (25), ತಿಮ್ಮಪ್ಪ ಖಾರ್ವಿ(50), ಹರ್ಷಿತ್ ಖಾರ್ವಿ (25), ರಂಜಿತ್ ಖಾರ್ವಿ (22), ಹರೀಶ್ ಖಾರ್ವಿ(22), ಶ್ರೀನಿವಾಸ ಖಾರ್ವಿ(59), ಸುನೀಲ್ ಖಾರ್ವಿ (22) ಬಂಧಿತ ಆರೋಪಿಗಳು. ಬಂಧಿತರನ್ನು ನಿನ್ನೆ ಪೊಲೀಸರು ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ವಾದ ಮಂಡಿಸಿದರು. ಇವರಿಂದ ಪೊಲೀಸರು ಹದಿನಾಲ್ಕು ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ.