‘ಮೀನಮುಹೂರ್ತ’ ಬಿಟ್ಟರೆ ೬ ಶತಮಾನ ಪ್ರತಿಷ್ಠೆ ಅಸಾಧ್ಯ

ಪಡುಮಲೆ ಬ್ರಹ್ಮಕಲಶೋತ್ಸವ-ನಾಗರಾಜ ಪ್ರತ್ಯಕ್ಷ
ಪುತ್ತೂರು, ಎ.೨೭- ಕೋಟಿಚೆನ್ನಯರ ಮೂಲ ಸಾನಿಧ್ಯವಾಗಿರುವ ಪಡುಮಲೆಯಲ್ಲಿ ಕೊರೊನಾ ಅಬ್ಬರದ ನಡುವೆಯೂ ಪ್ರತಿಷ್ಠಾ-ಬ್ರಹ್ಮಕಲಶೋತ್ಸವ ಕಾರ್ಯದ ಪೂಜಾ ವಿಧಿವಿದಾನಗಳನ್ನು ನಡೆಸಲಾಯಿತು. ಪ್ರಸ್ತುತ ಇಟ್ಟಿರುವ ಮೀನ ಮಹೂರ್ತವನ್ನು ತಪ್ಪಿಸಿದರೆ ಮುಂದೆ ೫-೬ ಶತಮಾನಗಳ ತನಕ ಪ್ರತಿಷ್ಠಾ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಕಾರಣ ಇದೀಗ ಪೂಜಾ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ. ಕೊರೊನಾ ನಿಯಮಗಳನ್ನು ಅನುಸರಿಸಿಕೊಂಡು ಈ ಕಾರ್ಯ ನಡೆಸಲಾಗುತ್ತಿದೆ.


ಸುಮಾರು ೫೦೦ ವರ್ಷಗಳ ಸಾನಿಧ್ಯದ ಪಡುಮಲೆಯಲ್ಲಿ ಪೂಜಾವಿಧಿ ವಿದಾನಗಳು ಆರಂಭಗೊಳ್ಳುತ್ತಿದ್ದಂತೆ ವಿವಿಧ ಜಾತಿಯ ನಾಗಗಳು ಪ್ರತ್ಯಕ್ಷವಾಗುವ ಮೂಲಕ ಸಾನಿಧ್ಯದ ಪ್ರತಿಷ್ಠಾಕಾರ್ಯಕ್ಕೆ ಭಯಭಕ್ತಿಯ ವಾತಾವರಣವನ್ನು ಮೂಡಿಸಿತು.
ಎಪ್ರಿಲ್ ೨೪ರಂದು ಈ ಪೂಜಾವಿಧಿವಿದಾನಗಳು ಆರಂಭವಾಗಿದ್ದು, ಕೋಟಿಚೆನ್ನಯ ಜನ್ಮಸ್ಥಾನ, ಮೂಲಸ್ಥಾನದ ನಾಗಬೆರ್ಮರ ಗುಡಿ, ನಾಗಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ, ದೇಯಿ ಬೈದೆತಿ ಸಾನಿಧ್ಯದ ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಎ.೨೨ರಿಂದ ೨೪ ತನಕ ವೈಭವದಿಂದ ಆಚರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕೊರೊನಾ ಹಿನ್ನಲೆಯಲ್ಲಿ ಮತ್ತೆ ಕಾರ್ಯಕ್ರಮ ಮುಂದೂಡಲು ಚಿಂತನೆ ನಡೆಸಿ ಪ್ರಶ್ನಾ ಚಿಂತನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಎ.೨೪ರ ಮೀನ ಮುಹೂರ್ತದ ಶ್ರೇಷ್ಠ ಕಾಲವನ್ನು ಮುಂದೂಡಿದರೆ ಮುಂದೆ ಶತಮಾನಗಳೇ ಬೇಕಾಗುತ್ತದೆ, ಆರಾಧನಾ ಕಾರ್ಯಕ್ರಮಗಳಿಗೆ ಕನಿಷ್ಠ ೫ರಿಂದ ೬ ಶತಮಾನಗಳ ಕಾಲ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ವಿಚಾರ ಕಂಡುಬಂತು. ಈ ಹಿನ್ನಲೆಯಲ್ಲಿ ಇದೀಗ ಪ್ತತಿಷ್ಠಾ-ಬ್ರಹ್ಮಕಲಶೋತ್ಸವ ಭಕ್ತರ ಸಂಗಮವಿಲ್ಲದೆ ವೈದಿಕರು ಹಾಗೂ ಸಮಿತಿ ಸದಸ್ಯರಿಗೆ ಮೀಸಲಾಗಿ ನಡೆಸಲಾಗುತ್ತಿದೆ.
ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ತಲೆಯಲ್ಲಿ ನಾಗಾಭರಣದ ಕಿರೀಟ ಧರಿಸಿ ಅಶ್ವಾರೂಢ ಭಂಗಿಯಲ್ಲಿರುವ ಕೋಟಿಚೆನ್ನಯರ ಕುದೇವರಾದ ನಾಗಬೆರ್ಮರ ಶಿಲಾಮಯ ಮೂಲಸ್ಥಾನ, ಚಿತ್ರಕೂಟದ ನಾಗಬ್ರಹ್ಮ,ನಾಗಕನ್ನಿಕೆ, ನಾಗರಾಜ, ನಾಗಸನ್ನಿಧಿ, ಎಡಬದಿಯಲ್ಲಿ ರಕ್ತೇಶ್ವರಿ ದೈವ ಸ್ಥಾನ ನಿರ್ಮಾಣವಾಗಿದೆ. ಮುಂಭಾಗದಲ್ಲಿ ದೇಯಿಬೈದೆತಿ ಸಮಾಧಿಸ್ಥಳ, ತೀರ್ಥಬಾವಿ ನವೀಕರಣಗೊಂಡಿದೆ. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಮೀನ ಮುಹೂರ್ತದಲ್ಲಿ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಹಾಪೂಜೆ.ಗಣಪತಿ ಹವನ, ಬ್ರಹ್ಮಕಲಶಾಭಿಷೇಕ ಮಹಾಪೂಜೆ, ಮಂತ್ರಾಕ್ಷತೆ ಸಹಿತ ವಿವಿಧ ಪೂಜಾ ವಿಧಿವಿದಾನಗಳು ನೆರವೇರಿತು.
ಸುಮಾರು ೫೦೦ ವರ್ಷಗಳ ಹಿಂದೆಯೇ ಪಡುಮಲೆಯ ಶ್ರೇಷ್ಟ ನಾಗರಾಧಾನ ಕ್ಷೇತ್ರವಿದ್ದು, ಆ ಸಂದರ್ಭದಲ್ಲಿ ನಾಗಗಳು ಜನತೆಗೆ ದರುಶನ ನೀಡುತ್ತಿದ್ದವು ಎಂಬ ಐತಿಹ್ಯ ಇದೆ. ಕಾಲಾನಂತರ ಈ ಕ್ಷೇತ್ರ ಪಾಳುಬಿದ್ದಿತ್ತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ಪ್ರಕಾರ ಪಡುಮಲೆಯಲ್ಲಿ ದೊರೆತ ಅಪೂರ್ವವಾದ ನಾಗನ ಪ್ರತಿಮೆಗಳು. ನಾಗಯಕ್ಷಿಣಿ, ನಾಗಬ್ರಹ್ಮ ಹಾಗೂ ನಾಗಕೆತ್ತನೆಗಳು ಕುಂಬ್ಳೆ ಸೀಮೆಯ ಬೇರೆ ಭಾಗದಲ್ಲಿ ಗೋಚರಿಸಿಲ್ಲ. ಅಷ್ಟೊಂದು ಅದ್ಭುತವಾದ ಕೆತ್ತನೆಗಳು ಇಲ್ಲಿ ಕಂಡುಬಂದಿವೆ. ಹಾಗಾಗಿ ಅತೀ ಪುರಾತನ ಮತ್ತು ಅತೀ ವಿಶಿಷ್ಟವಾದ ಈ ತಾಣ ಮೂಲ ನಾಗಸ್ಥಾನವಾಗಿದೆ ಎನ್ನುತ್ತಾರೆ.
ಕಳೆದ ೪೦ ವರ್ಷಗಳ ಹಿಂದೆ ಮಂಗಳೂರಿನ ಹಂಪನಕಟ್ಟೆ ಉದ್ಯಮಿ ಜೆ.ವಿ.ಸೀತಾರಾಮ್ ಈ ನಾಗ ನೆಲೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದರು. ಆದರೆ ಇಲ್ಲಿ ನಾಗಗಳು ಪ್ರತ್ಯಕ್ಷವಾದ ಕಾರಣ ಕ್ಷೇತ್ರ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿಯೂ ಕೃಷ್ಣ ಸರ್ಪ, ನಾಗರಾಜ, ಎಲೆ ನಾಗ ಮುಂತಾದ ವಿವಿಧ ಜಾತಿಯ ನಾಗಗಳು ಪ್ರತ್ಯಕ್ಷಗೊಂಡು ಜನತೆಗೆ ದರುಶನ ನೀಡುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಇಂಬು ನೀಡುವ ಕೆಲಸ ನಡೆದಿದೆ ಎನ್ನುತ್ತಾರೆ ಇಲ್ಲಿನ ಭಕ್ತವೃಂದ.