ಮೀಟರ್ ಕೊರತೆ; ಜೆಸ್ಕಾಂ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ ಆ.5ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧಾರ

ಕಲಬುರಗಿ,ಆ 2: ಕಳೆದ ಎಂಟು ತಿಂಗಳಿಂದ ಜೆಸ್ಕಾಂ ವ್ಯಾಪ್ತಿಯಲ್ಲಿ ಸಿಂಗಲ್ ಹಾಗೂ ತ್ರೀ ಫೇಸ್ ವಿದ್ಯುತ್ ಮಾಪಕಗಳ ಕೊರತೆ ಕಾಡುತ್ತಿದ್ದು, ಕೂಡಲೆ ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಇದೇ ಆ.5ರಂದು ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಆರ್.ಮಾಲಿಪಾಟೀಲ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸುಮಾರು 25 ಸಾವಿರ ವಿದ್ಯುತ್ ಗುತ್ತಿಗೆದಾರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಕಳೆದ ಎಂಟು ತಿಂಗಳಿಂದ ವಿದ್ಯುತ್ ಮಾಪಕಗಳ ಕೊರತೆ ಕಾಡುತ್ತಿದೆ. ಇದರಿಂದಾಗಿ ಹೊಸದಾಗಿ ಮನೆ ನಿರ್ಮಿಸುತ್ತಿರುವ ಗ್ರಾಹಕರು ಹಾಗೂ ವಾಣಿಜ್ಯ ಉದ್ದೇಶದ ಬಳಕೆದಾರರಿಗೆ ಮೀಟರ್ ಅಳವಡಿಸಲಾಗದೆ ತೊಂದರೆ ಎದುರಿಸಲಾಗುತ್ತಿದೆ. ಈ ಕುರಿತು ಕಳೆದ ಮೂರು ತಿಂಗಳಿಂದ ಮೇಲಿಂದ ಮೇಲೆ ಜೆಸ್ಕಾಂ ಮುಖ್ಯ ಅಭಿಯಂತರರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶಕರಿಗೆ ಮನವಿ ಸಲ್ಲಿಸಿದಾಗ್ಯೂ ಏನೂ ಪ್ರಯೋಜನವಾಗಿಲ್ಲ. ಜೆಸ್ಕಾಂ ಅಧಿಕಾರಿಗಳ ಈ ಧೋರಣೆ ವಿರೋಧಿಸಿ ಜುಲೈ 24ರಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವಿದ್ಯುತ್ ಗುತ್ತಿಗೆದಾರರು ಕಲಬುರಗಿ ನಗರದಲ್ಲಿ ಧರಣಿ ಕೈಗೊಂಡಾಗ ಸಂಜೆಯಾದರೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಧರಣಿ ನಿರತರನ್ನು ಭೇಟಿ ಮಾಡಲು ಬರಲಿಲ್ಲ. ಹೀಗಾಗಿ, ಕೊನೆಗೆ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲರು ಸ್ಥಳಕ್ಕೆ ಭೇಟಿ ಕೊಟ್ಟು ವ್ಯವಸ್ಥಾಪಕ ನಿರ್ದೇಶಕರಿಗೆ ಬುಲಾವ್ ನೀಡಿದ ಬಳಿಕವೇ ಅವರು ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವ ಲಿಖಿತ ಆಶ್ವಾಸನೆ ನೀಡಿದ್ದರು. ದುರಂತವೆಂದರೆ, ಜು.25ರಂದು ಜೆಸ್ಕಾಂ ತಾಂತ್ರಿಕ ನಿರ್ದೇಶಕರು ತಮ್ಮದೇ ಆದೇಶವನ್ನು ರದ್ದುಪಡಿಸಿದ್ದಾರೆ ಎಂದು ಮಾಲಿಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಈ ಎಲ್ಲ ಘಟನಾವಳಿಗಳ ಹಿನ್ನೆಲೆಯಲ್ಲಿ ವಿದ್ಯುತ್ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರ ಮಧ್ಯೆ ಇರಬೇಕಾದ ಅವಿನಾಭಾವ ಸಂಬಂಧಕ್ಕೆ ಧಕ್ಕೆ ತಗುಲಿದಂತಾಗಿದೆ. ಹಾಗಾಗಿ, ಇದೇ ಆಗಸ್ಟ್ 5ರಂದು ಕಲಬುರಗಿ ನಗರಕ್ಕೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿಗಳಿಗೆ ಬೃಹತ್ ಪ್ರತಿಭಟನೆಯ ನಂತರ ಮನವಿ ಪತ್ರ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಸಂಘದ ಗೌರವ ಕಾರ್ಯದರ್ಶಿ ಕುಪೇಂದ್ರ ಎಂ.ಶಿವನಾಯಕ, ಪದಾಧಿಕಾರಿಗಳಾದ ಬಸವರಾಜ ಒಡೆಯರ್, ಬಸವಲಿಂಗಪ್ಪ, ನಾಗರಾಜ ಹಾಗೂ ಅಯ್ಯನಗೌಡ ಪಾಟೀಲ್ ಇದ್ದರು.