`ಮಿ. ಪ್ಲಾನೆಟ್’ ಕಪ್ ದೇಹದಾಢ್ರ್ಯ ಸ್ಪರ್ಧೆ

ಹುಬ್ಬಳ್ಳಿ, ಏ2: ಧಾರವಾಡ ಜಿಲ್ಲಾ ದೇಹದಾಢ್ರ್ಯ ಪಟುಗಳ ಸಂಸ್ಥೆಯ ಆಶ್ರಯದಲ್ಲಿ ನಗರದ ಪ್ಲಾನೆಟ್ ಜಿಮ್ ಹಾಗೂ ಸಹಾರಾ ಫೌಂಡೇಶನ್ ವತಿಯಿಂದ ಇತ್ತೀಚೆಗೆ ದೇವರಗುಡಿಹಾಳ ರಸ್ತೆ, ವಿಶಾಲ ನಗರದ ಎಚ್.ಕೆ.ಜಿ.ಎನ್. ಹಾಲ್‍ನಲ್ಲಿ ನಡೆದ 6ನೇ ‘ಮಿ. ಪ್ಲಾನೆಟ್ ಕಪ್’ ದೇಹದಾಢ್ರ್ಯ ಸ್ಪರ್ಧೆಯನ್ನು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಣ್ಯರಾದ ಅಲ್ತಾಫನವಾಜ ಕಿತ್ತೂರ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಎಲ್ಲರೂ ಸರಕಾರದ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕಲ್ಲದೇ ದೇಹಕ್ಕೆ ಹೊಂದುವಂತಹ ಕ್ರೀಡಾ ಚಟುವಟಿಕೆಗಳನ್ನು ಮಾಡುತ್ತಾ ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಬೇಕು. ಪ್ರಸ್ತುತ ಈದ್ ಹಾಗೂ ಹೋಳಿ ಹಬ್ಬದ ಪ್ರಯುಕ್ತ ಎಲ್ಲರೂ ಶಾಂತ ರೀತಿಯಿಂದ ಹಬ್ಬಗಳನ್ನು ಆಚರಿಸಬೇಕೆಂದು ಮನವಿ ಮಾಡಿಕೊಂಡರು.
ಮತ್ತೋರ್ವ ಅತಿಥಿ ಸಹಾರಾ ಫೌಂಡೇಶನ್‍ನ ಅಧ್ಯಕ್ಷ ಮೊಹಮ್ಮದ ಗೌಸ್ ಖಾಜಿ ಮಾತನಾಡಿ, ಪ್ಲಾನೆಟ್ ಜಿಮ್ ಮಾಲಕರಾದ ಸಿರಾಜ್ ರಬಕವಿ ಹಾಗೂ ಸಮೀರ ರಬಕವಿ ಅವರು ದೇಹದಾಢ್ರ್ಯ ಪಟುಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡಿ, ಜಿಲ್ಲಾದ್ಯಂತ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಹೆಮ್ಮೆಯ ವಿಷಯ. ಇದರಿಂದ ಧಾರವಾಡ ಜಿಲ್ಲಾ ದೇಹದಾಡ್ರ್ಯ ಪಟುಗಳ ಸಂಸ್ಥೆಗೆ ಪ್ಲಾನೆಟ್ ಜಿಮ್ ವತಿಯಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದ್ದು, ಅವರು ಇನ್ನೂ ಹೆಚ್ಚಿನ ಸ್ಪರ್ಧೆಗಳನ್ನು ಆಯೋಜಿಸಬೇಕೆಂದು ತಿಳಿಸಿದರು. ಇನ್ನೋರ್ವ ಧುರೀಣರಾದ ಇಮ್ರಾನ್ ಪಾಷಾ ಉಪಸ್ಥಿತರಿದ್ದರು.
55ಕೆಜಿ, 60ಕೆಜಿ, 65ಕೆಜಿ, 70ಕೆಜಿ, 75ಕೆಜಿ ಹೀಗೆ 5 ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ, ಜಿಲ್ಲೆಯಿಂದ 60ಕ್ಕೂ ಹೆಚ್ಚು ಜನ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇದರಲ್ಲಿ ಪ್ಲಾನೆಟ್ ಜಿಮ್‍ನ ರಜಾಕ್‍ಖಾನ್ ಪಠಾಣ ಇವರು ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರಹೊಮ್ಮಿ ಜಿಲ್ಲಾ ಮಟ್ಟದ 6ನೇ ಮಿ. ಪ್ಲಾನೆಟ್ ಕಪ್‍ನ್ನು ತನ್ನದಾಗಿಸಿಕೊಂಡರು.
55ಕೆಜಿ ವಿಭಾಗದಲ್ಲಿ ಮಹ್ಮದಸಮೀರ ಹೊಸಮನಿ-ಪ್ರಥಮ, ತೊಫಿಸಿಫ್ ಎ. ಕಾರಿಗರ-ದ್ವಿತೀಯ, ರಾಹುಲ್ ಲಾಡ್-ತೃತಿಯ, ಇರ್ಫಾನ್ ನದಾಫ-ನಾಲ್ಕನೇ, ಶಾದ್ ಅಲಿ-ಐದನೇ ಸ್ಥಾನವನ್ನು ಪಡೆದಿದ್ದಾರೆ.
60ಕೆಜಿ ವಿಭಾಗದಲ್ಲಿ ಜಾಕೀರ ಹುಳ್ಳೂರ-ಪ್ರಥಮ, ಅವಿನಾಶ ಮಂಟೂರ-ದ್ವಿತೀಯ, ಸಂತೋಷ ವಾಡಕರ-ತೃತೀಯ, ಅಕೀಫ್ ಬಳ್ಳಾರಿ-ನಾಲ್ಕನೇ, ವಿನೋದ ಬಳ್ಳಾರಿ-ಐದನೇ ಸ್ಥಾನವನ್ನು ಪಡೆದಿದ್ದಾರೆ.
65ಕೆಜಿ ವಿಭಾಗದಲ್ಲಿ ಶೌಕತ್‍ಅಲಿ-ಪ್ರಥಮ, ಸಮೀರ ಪಠಾಣ-ದ್ವಿತೀಯ, ಚೇತನ ಮಾಲವಾಡ-ತೃತೀಯ, ರಾಜಕುಮಾರ-ನಾಲ್ಕನೇ, ಹನುಮಂತ-5ನೇ ಸ್ಥಾನವನ್ನು ಪಡೆದಿದ್ದಾರೆ.
70ಕೆಜಿ ವಿಭಾಗದಲ್ಲಿ ರಾಹುಲ್ ಚಂದಾವರಕರ-ಪ್ರಥಮ, ವಾಸೀಮ ಅಹ್ಮದಗಟ್ಟಿ-ದ್ವಿತೀಯ, ವಿಶಾಲ ಹೂಗಾರ-ತೃತೀಯ, ಅರ್ಜುನ ನಾಯ್ಕ-ನಾಲ್ಕನೇ, ರಿಜ್ವಾನ್-5ನೇ ಸ್ಥಾನವನ್ನು ಪಡೆದಿದ್ದಾರೆ.
75ಕೆಜಿ ವಿಭಾಗದಲ್ಲಿ ರಜಾಕ್‍ಖಾನ್ ಪಠಾಣ-ಪ್ರಥಮ, ರಾಜಶೇಖರ-ದ್ವಿತೀಯ, ಬಸವರಾಜ ಎಸ್.ಎನ್.-ತೃತೀಯ, ನಿರಂಜನ ನಾಯ್ಕ-ನಾಲ್ಕನೇ, ಶಾರುಖ್ ಶೇಖ್-ಐದನೇ ಸ್ಥಾನವನ್ನು ಪಡೆದಿದ್ದಾರೆ.
ನಿರ್ಣಾಯಕರಾಗಿ ರಾಷ್ಟ್ರೀಯ ನಿರ್ಣಾಯಕರಾದ ಹಾಗೂ ಧಾರವಾಡ ಜಿಲ್ಲಾ ದೇಹದಾಢ್ರ್ಯ ಪಟುಗಳ ಸಂಸ್ಥೆ ಅಧ್ಯಕ್ಷ ಶರೀಫ ಮುಲ್ಲಾ, ಕಾರ್ಯದರ್ಶಿ ಶಂಕರ ಪಿಳ್ಳೆ, ಸಲೀಂ ಗೌರ್, ಮಹ್ಮದ ಯದ್ರೂಸ್, ಖಾನ್ ಅಲಿ, ರೇವತಿ ಎಸ್. ಪಿಳ್ಳೆ, ಹಾಗೂ ಇನ್ನಿತರ ಜಿಲ್ಲಾ-ರಾಜ್ಯ ನಿರ್ಣಾಯಕರು ಹಾಗೂ ಪದಾಧಿಕಾರಿಗಳು ಇದ್ದರು.
ಪ್ಲಾನೆಟ್ ಜಿಮ್‍ನ ಸಿರಾಜ್ ರಬಕವಿ ಸ್ವಾಗತಿಸಿದರು, ಶಂಕರ ಪಿಳ್ಳೆ ನಿರೂಪಿಸಿದರು. ಶರೀಫ ಮುಲ್ಲಾ ವಂದಿಸಿದರು.