
ಸಂಜೆವಾಣಿ ವಾರ್ತೆ
ದಾವಣಗೆರೆ; ಸೆ.6 : ಮಿಷನ್ ಇಂದ್ರಧನುಷ್ ಲಸಿಕಾಕರಣವು ಸೆ.12 ರಿಂದ 16 ರವೆಗೆ ನಡೆಯಲಿದ್ದು, ಅಂಗನವಾಡಿಗಳಿಲ್ಲದ ಜನ ವಸತಿ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಿಸಿ ಇಂದ್ರಧನುಷ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ.ಎಂ.ವಿ ತಿಳಿಸಿದರು.ಸೆಪ್ಟಂಬರ್ 5 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಿದ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಡಿಟಿಎಫ್‍ಐ ಸಭೆಯ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿ ದಾವಣಗೆರೆ ಜಿಲ್ಲೆಯಲ್ಲಿ 2017ರಲ್ಲಿ ಇಂದ್ರಧನುಷ್ ಅಭಿಯಾನವು ಪ್ರಾರಂಭವಾಗಿರುತ್ತದೆ. 5 ವರ್ಷದೊಳಗಿನ ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿ ಇಂದ್ರಧನುಷ್ ಲಸಿಕೆ ನೀಡಲಾಗುತ್ತಿದೆ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದ ಮಕ್ಕಳ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದರು. ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕೆಂದರು.ಲಸಿಕೆ ನೀಡುವಾಗ ಯಾವುದೇ ಲೋಪದೋಷ ಬಾರದಂತೆ ಮತ್ತು ತಾಯಂದಿರಿಗೆ ಲಸಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮಕ್ಕಳಿಗೆ ಲಸಿಕೆ ಕೊಡಬೇಕು. ಆರೋಗ್ಯ ಇಲಾಖೆಯು ಕ್ರಿಯಾತ್ಮಾಕ ಜಾಹೀರಾತು ನೀಡುವ ಮೂಲಕ ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.ಈ ಅಭಿಯಾನದಲ್ಲಿ ಲಸಿಕೆ ಪಡೆಯದೇ ವಂಚಿತರಾಗಿರುವ, ಬಿಟ್ಟು ಹೋಗಿರುವ, ಪ್ರದೇಶಗಳು ಮತ್ತು ಸಮುದಾಯಗಳನ್ನು ಗುರುತಿಸಿ ಅವರಿಗೆ ಇಂದ್ರಧನುಷ್ ಲಸಿಕೆ ಹಾಕಲು ಗುರಿಯನ್ನು ಹೊಂದಬೇಕು ಎಂದರು.